ADVERTISEMENT

DH Bengaluru 2040 Summit: ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ದ್ರಾವಿಡ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 11:10 IST
Last Updated 20 ಫೆಬ್ರುವರಿ 2026, 11:10 IST
   

ಬೆಂಗಳೂರು: ಮಕ್ಕಳಿಗೆ ಆಟವಾಡಲು ಸರಳವಾಗಿ ಅವಕಾಶಗಳು ದೊರೆಯಬೇಕು. ಕ್ರೀಡೆಯು ಸಮಯದ ಅಭಾವ, ಅವಕಾಶಗಳ ವಂಚನೆ, ಟ್ರಾಫಿಕ್ ಮತ್ತು ಮೂಲಸೌಕರ್ಯಗಳ ಒತ್ತಡಕ್ಕೆ ಬಲಿಯಾಗಬಾರದು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಹೇಳಿದರು.

ಡೆಕ್ಕನ್ ಹೆರಾಲ್ಡ್ ಬೆಂಗಳೂರು–2040 ಶೃಂಗಸಭೆಯಲ್ಲಿ ಬೆಂಗಳೂರಿನ ಬೆಳವಣಿಗೆ ಕುರಿತು ರಾಹುಲ್ ದ್ರಾವಿಡ್ ಅವರು ಮಾತನಾಡಿದರು.

‘ನನಗೆ, ಬೆಂಗಳೂರು ಯಾವಾಗಲೂ ಕ್ರೀಡಾ ನಗರ ಎನಿಸುತ್ತದೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿ ಜಾಗತಿಕ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುವಲ್ಲಿಯೂ ಮುಂದಿದೆ’ ಎಂದರು. ಇದೇ ಸಂದರ್ಭದಲ್ಲಿ ಅವರು, ಬಾಲ್ಯದಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದದ್ದು, ಶಾಲಾ ದಿನಗಳು, ನೆರೆಹೊರೆಯವರ ಜೊತೆಗೆ ಮತ್ತು ಸ್ನೇಹಿತರ ಜೊತೆ ಆಡಿರುವುದನ್ನು ನೆನಪಿಸಿಕೊಂಡರು.

ADVERTISEMENT

ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆಯಲ್ಲಿ ಕಳೆದ ದಿನಗಳ ಮೆಲಕು ಹಾಕಿದ ಅವರು, ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. ಶಾಲಾ ದಿನಗಳಲ್ಲಿ ತರಗತಿಗಿಂತಲೂ ಹೆಚ್ಚಾಗಿ ತರಗತಿಯ ಹೊರಗೆ ಕಳೆದಿರುವುದಾಗಿಯೂ ಅವರು ತಿಳಿಸಿದರು. ‘ಹಾಕಿ ಮೈದಾನಗಳಲ್ಲಿ ಓಡಾಡುವುದು, ಶಾಲಾ ಮಟ್ಟದ ಕ್ರಿಕೆಟ್ ಆಡಿರುವುದು ಮೌಲ್ಯಗಳನ್ನು ರೂಪಿಸಿತು. ತಂಡದ ಜೊತೆ ಕಳೆದ ದಿನಗಳು ಶಿಸ್ತು ಮತ್ತು ನಮ್ರತೆಯಲ್ಲಿ ರೂಪಿಸಿತು’ ಎಂದು ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಮ್ಮ ತಂದೆಯ ಜೊತೆಗೆ ತೆರಳಿ ರಣಜಿ ಟ್ರೋಫಿ ಪಂದ್ಯಗಳನ್ನು ನೋಡುವುದರೊಂದಿಗೆ ಕ್ರಿಕೆಟ್‌ನ ನಂಟು ಹೆಚ್ಚಾಯಿತು ಎಂದು ಅವರು ಹೇಳಿದರು.

ಡೆಕ್ಕನ್ ಹೆರಾಲ್ಡ್ ಬೆಂಗಳೂರು–2040 ಶೃಂಗಸಭೆಯಲ್ಲಿ ದ್ರಾವಿಡ್

ಪ್ರಸ್ತುತ ಬೆಂಗಳೂರು ನಗರವು ಅಭಿವೃದ್ಧಿಯಿಂದ ಬರುತ್ತಿರುವ ಸವಾಲುಗಳನ್ನು ಎದುರಿಸುತ್ತಿದೆ. ಜನ ಸಂಖ್ಯೆಯ ಹೆಚ್ಚಳವು ಅವಕಾಶ, ವೈವಿಧ್ಯತೆ ಮತ್ತು ನಗರದ ಶಕ್ತಿಯನ್ನು ಹೆಚ್ಚಿಸಿದೆ. ಆದರೆ ಅದು ಮೂಲಸೌಕರ್ಯದ ಮೇಲೆ ಅಗಾಧವಾದ ಒತ್ತಡವನ್ನು ಉಂಟು ಮಾಡುತ್ತಿದೆ. ಮೂಲಸೌಕರ್ಯ ಒದಗಿಸುವುದು ನಗರ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ’ ಎಂದು ಅವರು ಹೇಳಿದರು.

ಬೆಂಗಳೂರಿನ ಟ್ರಾಫಿಕ್ ಕುರಿತು ಮಾತನಾಡಿದ ಅವರು, ‘ಟ್ರಾಫಿಕ್‌ನಿಂದಾಗಿ ಪ್ರಯಾಣದಲ್ಲಿ ಕಳೆಯುವ ಸಮಯವು ಮಕ್ಕಳ ಆಟದ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

‘ಸೌಲಭ್ಯಗಳು ಇರುವ ಶಾಲೆಗಳು ಮತ್ತು ಕ್ರೀಡೆಯನ್ನು ಗೌರವಿಸುವ ಪೋಷಕರು ಇದ್ದರೂ ಸಹ ಆಟಕ್ಕೆ ಅವಕಾಶ ನೀಡುವ ಸ್ಥಳಾವಕಾಶ ಸೃಷ್ಟಿಸುವುದು ಮುಖ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.