ADVERTISEMENT

ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸದೇ ರಾಹುಲ್ ಪಲಾಯನ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 20:50 IST
Last Updated 8 ಆಗಸ್ಟ್ 2025, 20:50 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ರಾಹುಲ್‌ ಗಾಂಧಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡಿ ಪ್ರಜಾತಂತ್ರ ವ್ಯವಸ್ಥೆ ನಿಷ್ಕ್ರಿಯಗೊಳಿಸಲು ಹೊರಟಿದ್ದಾರೆ. ತಮ್ಮ ಆರೋಪಗಳಿಗೆ ಪೂರಕವಾಗಿ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸದೇ ಪಲಾಯನ ಮಾಡಿದ್ದಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

‘ಚುನಾವಣಾ ಆಯೋಗ ಯಾವ ರೀತಿ ಕೆಲಸ ಮಾಡುತ್ತದೆ. ಜನಪ್ರತಿನಿಧಿ ಕಾಯ್ದೆ ಏನು ಹೇಳುತ್ತದೆ ಎನ್ನುವ ಜ್ಞಾನ ರಾಹುಲ್‌ಗಾಂಧಿಗೆ ಇದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ’ ಎಂದು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮೂರು ಬಾರಿ ಸೋತಿದ್ದರಿಂದ ರಾಹುಲ್‌ ನಾಯಕತ್ವದ ಬಗ್ಗೆ ಕಾಂಗ್ರೆಸ್‌ನಲ್ಲಿ ಅಪಸ್ವರ ಇದೆ. ಅದನ್ನು ಮರೆಮಾಚಲು ಚುನಾವಣಾ ಆಯೋಗದ ವಿರುದ್ಧ ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದರು.

ADVERTISEMENT

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಮೊದಲೇ ಹೇಳಿದ್ದರು. ಅದರ ಬಗ್ಗೆ ಗುಮಾನಿ ಎದ್ದಿತ್ತು. ಹಾಗಿದ್ದರೆ ಅವರು ಗೋಲ್‌ಮಾಲ್‌ ಮಾಡಿದ್ದಾರಾ? ಆ ಫಲಿತಾಂಶದ ಬಗ್ಗೆ ನಾವು ಯಾರೂ ಪ್ರಶ್ನೆ ಮಾಡಿಲ್ಲ. ಮಹದೇವಪುರದಲ್ಲಿ ಒಂದು ಲಕ್ಷ ಮತದಾರರು ಹೆಚ್ಚಳವಾಗಿದ್ದಾರೆ. ಅವರಲ್ಲಿ ಎಷ್ಟು ಜನ ಯಾರಿಗೆ ಮತ ಹಾಕಿದ್ದಾರೆ ಎಂದು ಯಾರಿಗಾದರೂ ಗೊತ್ತಿದೆಯಾ’ ಎಂದು ಬೊಮ್ಮಾಯಿ ಪ್ರಶ್ನಿಸಿದರು.

‘ಚುನಾವಣಾ ಆಯೋಗವು ಪ್ರತಿ ಬೂತ್‌ನಲ್ಲಿ ಏಜೆಂಟ್‌ 1, ಏಜೆಂಟ್‌ 2 ಎಂದು ಎಲ್ಲ ಪಕ್ಷದವರನ್ನೂ ನೇಮಿಸುತ್ತದೆ. ಅವರನ್ನು ಮುಂದಿಟ್ಟುಕೊಂಡೇ ಮತದಾರರ ಪಟ್ಟಿ ಸಿದ್ಧಪಡಿಸುತ್ತಾರೆ. ಆಗ ಕಾಂಗ್ರೆಸ್‌ ಏಜೆಂಟರು ಇರಲಿಲ್ಲವಾ? ಚುನಾವಣಾ ಆಯೋಗ ರಾಹುಲ್‌ಗಾಂಧಿ ಅವರಿಗೆ ಈ ಪ್ರಶ್ನೆಯನ್ನು ಕೇಳಿತ್ತು.  ಪ್ರಮಾಣಪತ್ರ ಕೊಡಿ ಎಂದೂ ಆಯೋಗ ಕೇಳಿದೆ. ಸತ್ಯ ಬೇಕಿಲ್ಲದ ರಾಹುಲ್‌ ಹಿಟ್‌ ಅಂಡ್‌ ರನ್‌ ಮಾಡುತ್ತಿದ್ದಾರೆ. ಪ್ರಜಾತಂತ್ರಕ್ಕೆ ಅಪಾಯಕಾರಿ ಆಟ ಆಡುತ್ತಿದ್ದಾರೆ’ ಎಂದು ದೂರಿದರು.
 
 

‘ಮಹದೇವಪುರ ಮತದಾರರಿಗೆ ರಾಹುಲ್ ಅಪಮಾನ’

‘ಮಹದೇವಪುರ ಕ್ಷೇತ್ರದಲ್ಲಿ ‘ಮತಕಳ್ಳತನ’ ನಡೆದಿದೆ ಎಂದು ಆರೋಪ ಮಾಡುವ ಮೂಲಕ ರಾಹುಲ್‌ಗಾಂಧಿ ಅವರು ‘ಅಪಕ್ವತೆ’ ಪ್ರದರ್ಶಿಸಿದ್ದಾರೆ. ಅವರು ಆರೋಪ ಮಾಡಿರುವ ಅಷ್ಟೂ ಪ್ರಕರಣಗಳ ಬಗ್ಗೆ ರಿಯಾಲಿಟಿ ಚೆಕ್‌ ಮಾಡಿದ್ದೂ ಅವರ ಆರೋಪಗಳೆಲ್ಲವೂ ಹಸಿ ಸುಳ್ಳು ಸಾಬೀತಾಗಿದೆ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ರಾಹುಲ್‌ ಗಾಂಧಿ ನಿರ್ದಿಷ್ಟವಾಗಿ ಪ್ರಸ್ತಾಪಿಸಿದ್ದ ಪ್ರಕರಣಗಳ ಆರೋಪ ಮತ್ತು ಅನುಮಾನಗಳಿಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಬೂತ್‌ ಏಜೆಂಟರ ಪಟ್ಟಿ ಮತ್ತು ಕೆಲವು ವ್ಯಕ್ತಿಗಳು ಮತ ಚಲಾಯಿಸಿದ ದಾಖಲೆಗಳ ಸಮೇತ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಗುರುಕಿರಾಟ್‌ ಸಿಂಗ್‌ ಎಂಬುವರ ಹೆಸರು ಮತದಾರರ ಪಟ್ಟಿಯಲ್ಲಿ ನಾಲ್ಕು ಕಡೆ ಇದೆ ಎಂದು ಹೇಳಿದ್ದಾರೆ. ಇವರ ಮಾಹಿತಿ ಪರಿಶೀಲಿಸಿದಾಗ ನಾಲ್ಕು ಬಾರಿ ಮತದಾರರ ಪಟ್ಟಿಗೆ ಸೇರಿಸಲು ಅವರು ಪ್ರಯತ್ನಿಸಿದ್ದರು. ನಾಲ್ಕು ಬಾರಿ ತಿರಸ್ಕೃತವಾಗಿತ್ತು. ಮತದಾರರ ಪಟ್ಟಿ ಬಂದಾಗ ನಾಲ್ಕು ಕಡೆಯೂ ಅವರ ಹೆಸರಿತ್ತು. ಅದರ ಬೆನ್ನಲ್ಲೇ ಮೂರು ಕಡೆ ಹೆಸರು ತೆಗೆದುಹಾಕಲು ಫಾರ್ಮ್‌ 7 ಕೊಟ್ಟಿದ್ದರ ಪ್ರತಿಯನ್ನು ಅವರು ಪ್ರದರ್ಶಿಸಿದರು.

ಬೂತ್‌ ನಂಬರ್ 513 ರಲ್ಲಿ ಮಾತ್ರ ಒಂದೇ ಕಡೆ ಅವರು ಮತದಾನ ಮಾಡಿದ್ದಾರೆ ಎಂದು ಬೂತ್‌ ಏಜೆಂಟ್‌ ಗುರುತು ಹಾಕಿದ್ದ ಪ್ರತಿಯನ್ನು ಲಿಂಬಾವಳಿ ತೋರಿಸಿದರು. ಬಲ್ಕ್ ಮತದಾರರ ವಿಷಯವನ್ನು ಪ್ರಸ್ತಾಪಿಸಿದ ಅವರು ‘ರಾಹುಲ್‌ ಗಾಂಧಿ ಹೇಳಿದ ನಿರ್ದಿಷ್ಟ ಬೂತ್‌ನಲ್ಲಿ ಒಂದು ಕೊಠಡಿ ಪರಿಶೀಲಿಸಿದೆ. ಆದರೆ ಅಲ್ಲಿ 80 ಜನರ ಮತದಾರರ ಹೆಸರು ಇರುವುದು ನಿಜ. ಆದರೆ ಅದು ಕೊಠಡಿಯಲ್ಲ ಅದೊಂದು ಡಾರ್ಮೆಟ್ರಿಯಾಗಿದ್ದು 80ರಲ್ಲಿ 6 ಜನ ಮಾತ್ರ ನಮಗೆ ಸಿಕ್ಕಿದರು. ಅವರೆಲ್ಲ ಹೊಟೇಲ್ ಮತ್ತಿತರ ಕಡೆಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರಾಗಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.