ADVERTISEMENT

ಸ್ಯಾನಿಟರಿ ಪ್ಯಾಡ್‌ ಮೇಲೆ ರಾಹುಲ್‌ ಚಿತ್ರ | ಬಲವಂತದ ಕ್ರಮ ಬೇಡ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 15:37 IST
Last Updated 18 ಜುಲೈ 2025, 15:37 IST
ಕರ್ನಾಟಕ ಹೈಕೋರ್ಟ್‌ (ಸಂಗ್ರಹ ಚಿತ್ರ)
ಕರ್ನಾಟಕ ಹೈಕೋರ್ಟ್‌ (ಸಂಗ್ರಹ ಚಿತ್ರ)   

ಬೆಂಗಳೂರು: ‘ಸ್ಯಾನಿಟರಿ ಪ್ಯಾಡ್‌ ಮೇಲೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯ ರೂಪಾಂತರಗೊಳಿಸಿದ (ಮಾರ್ಫ್‌) ಚಿತ್ರ ಮುದ್ರಿಸಿದ ಮತ್ತು ಬಿಹಾರ ಮಹಿಳೆಯರ ಘನತೆ ಕೆರಳಿಸುವಂತೆ ಎಕ್ಸ್‌ನಲ್ಲಿ ಅಶ್ಲೀಲ ಟಿಪ್ಪಣಿ ಪ್ರಕಟಿಸಿದ ಆರೋಪದಡಿ ದೆಹಲಿ–ಹರಿಯಾಣದ ಇಬ್ಬರ ವಿರುದ್ಧ ನಗರದಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬಾರದು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

‘ನಮ್ಮ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್‌ ಮತ್ತು ಪ್ರಕರಣದ ಕುರಿತಂತೆ 1ನೇ ಎಸಿಎಂಎಂ ಕೋರ್ಟ್‌ನಲ್ಲಿರುವ ನ್ಯಾಯಿಕ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ದೆಹಲಿಯ ರತನ್‌ ರಂಜನ್‌ (32) ಮತ್ತು ಹರಿಯಾಣದ ಧಾರೂಹೇರಾ ನಿವಾಸಿ ಅರುಣ್‌ ಕುಮಾರ್‌ (39) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌, ‘ಕಳೆದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂಬ ಮುಚ್ಚಳಿಕೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ನೀಡಿಲ್ಲ. ವಾಸ್ತವದಲ್ಲಿ ಇದೇ ಕಾರಣಕ್ಕಾಗಿ ದೇಶದ ಇತರೆಡೆಗಳಲ್ಲೂ ಪ್ರಕರಣ ದಾಖಲಿಸಲಾಗಿದೆ. ಇದು ಅರ್ಜಿದಾರರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಆದ್ದರಿಂದ, ಈ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ರಾಜ್ಯ ಪ್ರಾಸಿಕ್ಯೂಟರ್ ಬಿ.ಎ.ಬೆಳ್ಳಿಯಪ್ಪ, ‘ಪ್ರಕರಣ ರದ್ದುಪಡಿಸಬಾರದು’ ಎಂದು ಬಲವಾಗಿ ಆಕ್ಷೇಪಿಸಿದರು. ಈ ಮಾತಿಗೆ ಅರುಣ್‌ ಶ್ಯಾಮ್‌ ಕೂಡಾ ಪ್ರತಿ ಆಕ್ಷೇಪ ವ್ಯಕ್ತಪಡಿಸಿ, ‘ಸಾರ್ವಜನಿಕರು ಚುನಾವಣೆಯ ವೇಳೆ ಇಂತಹ ಟೀಕೆ–ಟಿಪ್ಪಣಿಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಅಷ್ಟಕ್ಕೂ ಸ್ಯಾನಿಟರ್‌ ಪ್ಯಾಡ್‌ ಮೇಲೆ ರಾಹುಲ್‌ ಗಾಂಧಿ ಚಿತ್ರ ಮುದ್ರಿಸಿದವರು ನಾವಲ್ಲ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ’ ಎಂದು ‍ಪ್ರತಿಪಾದಿಸಿದರು.

ಈ ಮಾತಿಗೆ ನ್ಯಾಯಮೂರ್ತಿಗಳು, ‘ನೋಡಿ ರಾಹುಲ್‌ ಚಿತ್ರದ ಜೊತೆಗೆ ನಿಮ್ಮ ಅರ್ಜಿದಾರರು ಎಕ್ಸ್‌ನಲ್ಲಿ ಮಾಡಿರುವ ಟಿಪ್ಪಣಿ (ಹೊರ ಕವಚದವರೆಗೆ ಎಲ್ಲಾ ಸರಿಯಾಗಿಯೇ ಇದೆ. ಆದರೆ, ತಾವು ಒಳಗೇನು ಇರಿಸುತ್ತಿರುವಿರಿ. ಇದಂತೂ ತಪ್ಪು ರಾಹುಲ್‌ಜಿ. ಇಲ್ನೋಡಿ, ನೀವು ಇಲ್ಲಿ ಒಳಗೇನು ಮಾಡುತ್ತಿದ್ದೀರಾ ಎಂದು...) ಉತ್ತಮ ಅಭಿರುಚಿಯಿಂದ ಕೂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂತೆಯೇ, ‘ಅರ್ಜಿದಾರರ ವಿರುದ್ಧ ರಾಜ್ಯ ಪ್ರಾಸಿಕ್ಯೂಷನ್‌ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬಾರದು’ ಎಂದು ಆದೇಶಿಸಿ ವಿಚಾರಣೆ ಮುಂದೂಡಿದರು.

ಏನಿದು ದೂರು?:

‘ಅರ್ಜಿದಾರರು ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಸುಳ್ಳು, ಮಾನಹಾನಿಕರ ಮತ್ತು ಸ್ತ್ರೀದ್ವೇಷದ ವಿಷಯವನ್ನು ತಮ್ಮ ಎಕ್ಸ್ ಖಾತೆಯ ಮೂಲಕ ಪ್ರಸಾರ ಮಾಡಿರುತ್ತಾರೆ. ಇದನ್ನು ಅರುಣ್‌ ಕೋಸ್ಲಿ, ಸಿನ್ಹಾ, ಸುನಿಲ್‌ ಶರ್ಮಾ, ಸಿದ್ಧಾರ್ಥ ಸಂಜಯ ನಿರುಪಮಾ ಮತ್ತು ಇತರರು ಮರು ಟ್ವೀಟ್‌ ಮಾಡಿರುತ್ತಾರೆ. ಆದ್ದರಿಂದ, ಅರ್ಜಿದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಜೆಜೆಆರ್‌ ನಗರದ ಪ್ರಿಯಾಂಕ ದೇವಿ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 192, 336(4), 352ರ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.