ADVERTISEMENT

ಸ್ಮಶಾನಕ್ಕೆ ಜಾಗವಿಲ್ಲ; ರಸ್ತೆ ಬದಿಯಲ್ಲೇ ಶವ ಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 7:34 IST
Last Updated 29 ಆಗಸ್ಟ್ 2019, 7:34 IST
ಕವಿತಾಳ ಸಮೀಪದ ಸುಂಕನೂರು ಗ್ರಾಮದಲ್ಲಿ ಸ್ಮಶಾನ ಇಲ್ಲದ ಕಾರಣ ರಸ್ತೆ ಬದಿ ಶವ ಸಂಸ್ಕಾರಕ್ಕೆ ಬುಧವಾರ ತಯಾರಿ ನಡೆಯಿತು
ಕವಿತಾಳ ಸಮೀಪದ ಸುಂಕನೂರು ಗ್ರಾಮದಲ್ಲಿ ಸ್ಮಶಾನ ಇಲ್ಲದ ಕಾರಣ ರಸ್ತೆ ಬದಿ ಶವ ಸಂಸ್ಕಾರಕ್ಕೆ ಬುಧವಾರ ತಯಾರಿ ನಡೆಯಿತು   

ಕವಿತಾಳ (ರಾಯಚೂರು ಜಿಲ್ಲೆ): ತಾಲ್ಲೂಕಿನ ಸುಂಕನೂರ ಗ್ರಾಮದಲ್ಲಿಸ್ಮಶಾನ ಜಾಗದ ಕೊರತೆಯಿಂದಾಗಿ ರಸ್ತೆ ಬದಿಯಲ್ಲೇ ಶವ ಸಂಸ್ಕಾರ ಮಾಡಲಾಯಿತು.

ಗ್ರಾಮದ ಮುತ್ತಮ್ಮ ಯಮನಪ್ಪ ಎಂಬ ಮಹಿಳೆ ಮೃತಪಟ್ಟಿದ್ದರು. ಗ್ರಾಮದಲ್ಲಿ ಸ್ಮಶಾನ ಇಲ್ಲದ್ದರಿಂದ ರಸ್ತೆ ಬದಿ ಶವ ಸಂಸ್ಕಾರ ಮಾಡಲು ಮೃತಳ ಕುಟುಂಬ ತಯಾರಿ ಮಾಡಿಕೊಂಡಿದ್ದನ್ನು ಗ್ರಾಮದ ಕೆಲವರು ಮಸ್ಕಿ ತಹಶೀಲ್ದಾರ್‌ ಬಲರಾಮ ಕಟ್ಟಿಮನಿ ಅವರಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ರಸ್ತೆ ಬದಿಯೇ ಶವಸಂಸ್ಕಾರ ನಡೆಸಲಾಗಿತ್ತು.

ನಂತರ ಗ್ರಾಮಕ್ಕೆ ಬಂದು ಗ್ರಾಮಸ್ಥರ ಸಭೆ ನಡೆಸಿದ ಕಂದಾಯ ನಿರೀಕ್ಷಕ ಭೂಪತಿ ಮತ್ತು ಗ್ರಾಮಲೆಕ್ಕಿಗ ಬಸವರಾಜ, ‘ಗ್ರಾಮದ ಸರ್ವೇ ನಂ. 20ರಲ್ಲಿ ಸರ್ಕಾರಿ ಜಮೀನು ಲಭ್ಯವಿದ್ದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ಎಕರೆ ಜಾಗವನ್ನು ಸ್ಮಶಾನಕ್ಕೆ ಮಂಜೂರು ಮಾಡಲಾಗುವುದು’ ಎಂದರು.

ADVERTISEMENT

‘ಈ ಹಿಂದೆ ಗ್ರಾಮಸ್ಥರು ಸ್ಮಶಾನಕ್ಕಾಗಿ ಬಳಸುತ್ತಿದ್ದ ಜಮೀನು ವ್ಯಕ್ತಿಯೊಬ್ಬರ ಹೆಸರಿನಲ್ಲಿದ್ದು, ಅವರು ಶವ ಸಂಸ್ಕಾರಕ್ಕೆ ಆಸ್ಪದ ನೀಡುತ್ತಿಲ್ಲ. ಬೇರೆಡೆ ಎರಡು ಎಕರೆ ಜಮೀನು ನೀಡಿದರೆ ಅನುಕೂಲವಾಗುತ್ತದೆ’ ಎಂದು ಗ್ರಾಮದ ಮರಿದೇವ, ಈರಣ್ಣ, ಬಸವರಾಜ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.