ADVERTISEMENT

ಮಗಳು ಧೈರ್ಯವಂತೆ, ಅವಳಿಗೆ ಕಿರುಕುಳ ಕೊಟ್ಟು ಕೊಲೆ ಮಾಡಲಾಗಿದೆ: ಪೋಷಕರ ಆರೋಪ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 10:53 IST
Last Updated 20 ಏಪ್ರಿಲ್ 2019, 10:53 IST
   

ರಾಯಚೂರು: 'ನನ್ನ ಮಗಳುಧೈರ್ಯವಂತೆ ಇದ್ದಳು. ಅವಳಿಗೆ ಕಿರುಕುಳ ಕೊಟ್ಟು, ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಿಸಬೇಕು'ಎಂದು ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಪಾಲಕರು ಕಣ್ಣೀರು ಹಾಕಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೋಷಕರು, 'ಇಂಟರ್ನಲ್‌ ಬರೆದು ಬರುತ್ತೇನೆ ಎಂದು ಏ.13 ರಂದು ಕಾಲೇಜಿಗೆ ಮಗಳು ಹೋದಳು. ಕೆಲ ಹೊತ್ತಿನ ಬಳಿಕ ಮನೆಯೊಳಗೆ ಒಬ್ಬ ಯುವಕ ದಿಢೀರ್ ಬಂದು ಹೋಗಿದ್ದರಿಂದ ಸಂಶಯ ಬಂತು. ಕೂಡಲೇ ಕಾಲೇಜಿಗೆ ತಂದೆ ನಾಗರಾಜ ಹೋಗಿ ಮಧುವಿಗಾಗಿ ಹುಡುಕಿದರೂ ಸಿಗಲಿಲ್ಲ. ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದರೂ ಪಡೆದುಕೊಳಲಿಲ್ಲ. ಮಗಳು ಶವವಾಗಿ ಸಿಗುವವರೆಗೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ' ಎಂದು ತಾಯಿ ಹೇಳಿದರು.

ಪೊಲೀಸರು ಬಂಧಿಸಿರುವ ಆರೋಪಿ ಸುದರ್ಶನ ಅವರ ಮಾವ ಆಂಜನೇಯ ಅದೇ ಪೊಲೀಸ್ ಠಾಣೆಯಲ್ಲಿದ್ದರು. ಅವರೇ ನಮಗೆ ಸಮಾಧಾನ ಹೇಳುತ್ತಾ ಬಂದು, ದೂರು ಪಡೆಯಲಿಲ್ಲ. ಶವ ಪತ್ತೆಯಾದ ದಿನದಂದು ಸೋಮವಾರ ಬೆಳಿಗ್ಗೆ ಪೊಲೀಸ್ ಆಂಜಿನೇಯ ಅವರು ಮಗಳುಒಯ್ದಿದ್ದ ಸ್ಕೂಟಿ ಮತ್ತು ಮೊಬೈಲ್‌ ಅನ್ನು ತಂದು ಒಪ್ಪಿಸಿದರು. ಇದನ್ನು ಸುದರ್ಶನ ಕೊಟ್ಟಿದ್ದಾನೆ ಎಂದು ಹೇಳಿದ್ದರು' ಎಂದರು.

ADVERTISEMENT

ಪಾಲಕರ ಪ್ರಶ್ನೆಗಳು:

*ಎಸ್ಸೆಸ್ಸೆಲ್ಸಿ ನಂತರ ಕನ್ನಡ ಬರೆಯವುದನ್ನೆ ಬಿಟ್ಟಿದ್ದ ಮಗಳು ಕನ್ನಡದಲ್ಲಿ ಡೆತ್ ನೋಟ್ ಹೇಗೆ ಬರೆಯಲು ಸಾಧ್ಯ?

* ಅವಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅವಳ ಬಳಿಯಿದ್ದ ಸ್ಕೂಟರ್ ಮತ್ತು ಮೊಬೈಲ್ ಕಾಲೇಜಿನ ವಾಟರ್‌ಮನ್ ಸುದರ್ಶನ ಬಳಿ ಹೇಗೆ ಬಂದವು?

* ಠಾಣೆಯಲ್ಲಿ ದೂರು ದಾಖಲಾಗದಂತೆ ಸುದರ್ಶನ ಮಾವ ಆಂಜೀನೆಯ ಸಂಚು ಮಾಡಿದ್ದರು. ಕಾಣೆ ದೂರು ಪಡೆದಿದ್ದರೆ ಮಗಳ ಸಾವು ತಪ್ಪಿಸಬಹುದಿತ್ತು?

25 ರಂದು ಪ್ರತಿಭಟನೆ

ವಿಶ್ವಕರ್ಮ‌ ಸಮಾಜದಿಂದ‌ ಏ. 25 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು. ವಿದ್ಯಾರ್ಥಿನಿ ಸಾವು ಖಂಡಿಸಿ ರಾಜ್ಯದಾದ್ಯಂತ ವಿಶ್ವಕರ್ಮ ಸಮಾಜದ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ಮುಖಂಡರು ತಿಳಿಸಿದರು.

ಇವನ್ನೂ ಓದಿ...

ವಿದ್ಯಾರ್ಥಿನಿ ಮನೆಗೆ ಭೇಟಿ
ಮೃತ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮನೆಗೆ ಜನಶಕ್ತಿ ಮಹಿಳಾ ಸಂಘಟನೆ ಹಾಗೂ ಮದ್ಯಪಾನ ವಿರೋಧಿ ಹೋರಾಟದ ಮುಖಂಡರು ಭೇಟಿ ನೀಡಿದರು.

ಇಂಥ ಹೀನ ಘಟನೆಗಳು ನಡೆಯಬಾರದು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕಠಿಣ ಶಿಕ್ಷೆ ಕಾನೂನು ರೂಪಿಸಬೇಕು ಎಂದರು. ಮಾಜಿ ನಕ್ಸಲ್ ನಾಯಕಿ ಮಲ್ಲಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.