ADVERTISEMENT

ರಾಯಚೂರಿನ ಒಂದಿಂಚೂ ಜಾಗವನ್ನು ತೆಲಂಗಾಣಕ್ಕೆ ಬಿಟ್ಟುಕೊಡಲ್ಲ: ಶಾಸಕ ಶಿವರಾಜ ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 11:22 IST
Last Updated 18 ಆಗಸ್ಟ್ 2022, 11:22 IST
ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ
ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ   

ರಾಯಚೂರು: 'ರಾಯಚೂರು ಜಿಲ್ಲೆಯ ಒಂದಿಂಚೂ ಜಾಗವನ್ನು ತೆಲಂಗಾಣಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ಹಿಂದೆ ನಾನು ಹೇಳಿಕೆ ನೀಡಿದ್ದರ ಬಗ್ಗೆ ಆವಾಗಲೇ ಸ್ಪಷ್ಟನೆ ಕೂಡಾ ನೀಡಿದ್ದೇನೆ' ಎಂದು ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ 'ಪ್ರಜಾವಾಣಿ'ಗೆ ತಿಳಿಸಿದರು.

'ತೆಲಂಗಾಣ ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಎನ್‌.ಎಸ್.ಬೋಸರಾಜ ಅವರ ಕುಮ್ಮಕ್ಕಿನಿಂದ ಪ್ರಿಯಾಂಕಾ ಖರ್ಗೆ ಮಾತನಾಡುತ್ತಿದ್ದಾರೆ. ಬೇಕಿದ್ದರೆ ಅವರೇ ತೆಲಂಗಾಣಕ್ಕೆ ಸೇರಿಕೊಳ್ಳಲಿ' ಎಂದರು.

'ನಾನು ನೀಡಿದ್ದ ಹೇಳಿಕೆ ಆಧರಿಸಿ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಸದನದಲ್ಲೇ ಪ್ರಸ್ತಾಪಿಸಿ ಮಾತನಾಡಿದ್ದರು. ಆ ಕೂಡಲೇ ನಾನು ತೆಲಂಗಾಣದ ನಾರಾಯಣಪೇಟ್‌ಗೆ ಹೋಗಿ ಅವರ ಹೇಳಿಕೆ ಖಂಡಿಸಿ ಮಾತನಾಡಿ ಬಂದಿದ್ದೇನೆ' ಎಂದು ಹೇಳಿದರು.

ADVERTISEMENT

'ಕಾಂಗ್ರೆಸ್‌ನವರಿಗೆ ಮಾತನಾಡುವುದಕ್ಕೆ ಬೇರೆ ವಿಷಯಗಳಿಲ್ಲ.‌ ಹೀಗಾಗಿ ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ತೆಲಂಗಾಣದವರು ಏನಾದರೂ ಹೇಳಿಕೊಳ್ಳಲಿ, ರಾಯಚೂರು ಜಿಲ್ಲೆ ಕರ್ನಾಟಕ ಅವಿಭಾಜ್ಯ ಅಂಗವಾಗಿದೆ' ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದರು.

ಶಾಸಕರ ಹೇಳಿಕೆ ವಿವಾದ: 2021 ಅಕ್ಟೋಬರ್ 7 ರಂದು ರಾಯಚೂರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿದ್ದ ಪಶುಸಂಗೋಪನೆ ಸಚಿವ ಪ್ರಭು ಚೌವಾಣ ಅವರ ಸಮ್ಮುಖ ಮಾತನಾಡಿದ್ದ ಶಾಸಕ ಡಾ.ಶಿವರಾಜ ಪಾಟೀಲ, ‘ಅಭಿವೃದ್ಧಿ ವಿಷಯದಲ್ಲಿ ರಾಯಚೂರು ಜಿಲ್ಲೆಯನ್ನು ಮೊದಲಿನಿಂದ ಕಡೆಗಣಿಸಲಾಗುತ್ತಿದೆ. ಉತ್ತರ ಕರ್ನಾಟಕವೆಂದರೆ ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಎಂದು ಪರಿಗಣಿಸಲಾಗಿದೆ. ಕಲ್ಯಾಣ ಕರ್ನಾಟಕವೆಂದರೆ ಬೀದರ್‌, ಕಲಬುರ್ಗಿ ಎರಡೇ ಜಿಲ್ಲೆಗಳು ಕಣ್ಣಿಗೆ ಕಾಣುತ್ತವೆ. ರಾಯಚೂರು ಬೇಡವಾಗಿದ್ದರೆ ತೆಲಂಗಾಣಕ್ಕೆ ಸೇರಿಸಿಬಿಡಿ’ ಎಂದು ಮಾತನಾಡಿದ ವಿಡಿಯೊ ವೈರಲ್‌ ಆಗಿತ್ತು.

ತೆಲಂಗಾಣದ ಪತ್ರಿಕೆಗಳು ಶಾಸಕರ ಹೇಳಿಕೆ ಆಧರಿಸಿ ಸುದ್ದಿಗಳನ್ನು ಪ್ರಕಟಿಸಿದ್ದವು. ತೆಲಂಗಾಣಕ್ಕೆ ಸೇರಬೇಕಾದ ಕರ್ನಾಟಕದ ಗಡಿ ಪ್ರದೇಶಗಳ ಬಗ್ಗೆ ರಾಜ್ಯ ಸರ್ಕಾರವು ಹಕ್ಕು ಮಂಡಿಸಲು ಇದು ಸಕಾಲ. ರಾಯಚೂರು ತೆಲಂಗಾಣದ ಅಭಿವೃದ್ಧಿಯ ಭಾಗವಾಗಲು ಸಿದ್ಧವಿದೆ ಎಂದು ಬರೆಯಲಾಗಿತ್ತು.

ಶಾಸಕರ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕೂಡಲೇ ಎಚ್ಚೆತ್ತ ಶಾಸಕ ಡಾ.ಶಿವರಾಜ ಪಾಟೀಲ ಕ್ಷಮೆಕೋರಿ ಸ್ಪಷ್ಟನೆ ನೀಡಿದ್ದರು.

ಹತ್ತು ತಿಂಗಳುಗಳ ಬಳಿಕ ವಿವಾದಿತ ಹೇಳಿಕೆ ಮತ್ತೆ ಪ್ರಸ್ತಾಪಕ್ಕೆ ಬಂದಿದೆ.

ಕೆಸಿಆರ್ ಹೇಳಿಕೆ: 'ನಮ್ಮ ಕಲ್ಯಾಣ ಕಾರ್ಯಕ್ರಮಗಳನ್ನು ನೋಡಿರುವ ರಾಯಚೂರು ಜಿಲ್ಲೆಯ ಜನರು ತೆಲಂಗಾಣಕ್ಕೆ ಸೇರಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತಿದ್ದಾರೆ' ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಅವರು ಬುಧವಾರ ವಿಕಾರಾಬಾದ್‌ನಲ್ಲಿ ಹೇಳಿಕೆ ನೀಡಿದ್ದರು.

ಆಕ್ಷೇಪ ಎತ್ತದ ಬಿಜೆಪಿ: ತೆಲಂಗಾಣ ಮುಖ್ಯಮಂತ್ರಿ ಹೇಳಿಕೆಯನ್ನು ಪ್ರಸ್ತಾಪಿಸಿ ಟ್ವಿಟ್ ಮಾಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕಾ ಖರ್ಗೆ, 'ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ವಿಲೀನ ಮಾಡಲು ಜನರು ಬಯಸಿದ್ದಾರೆ ಎಂದು ಕೆಸಿಆರ್ ಹೇಳಿಕೆ ನೀಡಿ 24 ಗಂಟೆಗಳಾದರೂ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಅಥವಾ ಸರ್ಕಾರದ ಯಾವುದೇ ಪ್ರತಿನಿಧಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಈ ಮಲತಾಯಿ ಧೋರಣೆ ಏಕೆ? ಒಂದು ವೇಳೆ ಬೆಳಗಾವಿ ಗಡಿ ಸಮಸ್ಯೆಯಾಗಿದ್ದರೆ ಇಡೀ ಸಚಿವ ಸಂಪುಟವೇ ರಕ್ಷಣೆಗೆ ಮುಂದಾಗುತ್ತಿತ್ತು. ಆದರೆ, ನಮ್ಮ ವಿಚಾರದಲ್ಲಿ ಯಾಕಿಲ್ಲ? ಬಿಜೆಪಿ ಸರ್ಕಾರ ನಮ್ಮನ್ನು ಕರ್ನಾಟಕದ ಭಾಗವೆಂದು ಪರಿಗಣಿಸುತ್ತದೆಯೋ ಅಥವಾ ಇಲ್ಲವೋ? ತೆಲಂಗಾಣದಲ್ಲಿ ವಿಲೀನ ಮಾಡಲು ಸೂಚಿಸಿದ ನಿಮ್ಮ ಶಾಸಕರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ' ಎಂದು ಅವರು ಪಶ್ನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.