ADVERTISEMENT

ಆಂಧ್ರ, ಬಿಹಾರಕ್ಕೆ ಎರಡು ರೈಲು ಯೋಜನೆ: ಸಂಪುಟ ಅಸ್ತು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:53 IST
Last Updated 24 ಅಕ್ಟೋಬರ್ 2024, 15:53 IST
<div class="paragraphs"><p>ರೈಲು</p></div>

ರೈಲು

   

ನವದೆಹಲಿ: ಅಮರಾವತಿಗೆ ರೈಲು ಸಂಪರ್ಕ ಒದಗಿಸುವುದು ಸೇರಿದಂತೆ ಎನ್‌ಡಿಎ ಪಾಲುದಾರ ಪಕ್ಷಗಳ ಆಡಳಿತವಿರುವ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ₹6,798 ಕೋಟಿ ಮೊತ್ತದ ಎರಡು ರೈಲು ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಗೆ ಸಂಪರ್ಕ ಕಲ್ಪಿಸಲು ₹2,245 ಕೋಟಿ ವೆಚ್ಚದಲ್ಲಿ 57 ಕಿ.ಮೀ ಉದ್ದದ ಹೊಸ ಮಾರ್ಗ ನಿರ್ಮಿಸಲಾಗುವುದು. ಇದಕ್ಕಾಗಿ ಕೃಷ್ಣಾ ನದಿಗೆ 3.2 ಕಿ.ಮೀ ಉದ್ದದ ಹೊಸ ಸೇತುವೆ ನಿರ್ಮಿಸಲಾಗುವುದು. ಯೋಜನೆ ಪೂರ್ಣಗೊಂಡ ನಂತರ, ಇದು ಭಾರತೀಯ ರೈಲ್ವೆ ಜಾಲದಲ್ಲಿಯೇ ಅತಿ ಉದ್ದದ ಸೇತುವೆಯಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಈ ಮಹತ್ವಾಕಾಂಕ್ಷೆಯ ಯೋಜನೆಯು ಅಮರಾವತಿಯಿಂದ ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತ ಸೇರಿದಂತೆ ಎಲ್ಲ ಮಹಾನಗರಗಳಿಗೆ ಸಂಪರ್ಕ ಒದಗಿಸುತ್ತದೆ ಎಂದು ಅವರು ಹೇಳಿದರು.

ಬಿಹಾರದ ನರ್ಕಟಿಯಾಗಂಜ್-ರಕ್ಸಾಲ್-ಸಿತಾಮರ್ಹಿ-ದರ್ಭಾಂಗಾ ಮತ್ತು ಸಿತಾಮರ್ಹಿ-ಮುಜಾಫರ್‌ಪುರ ನಡುವಿನ 256 ಕಿ.ಮೀ ಮಾರ್ಗವನ್ನು ಜೋಡಿ ಹಳಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. 

ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ನವೋದ್ಯಮಗಳಿಗೆ ₹1 ಸಾವಿರ ಕೋಟಿ ಬಂಡವಾಳ ಹೂಡಿಕೆ (ವೆಂಚರ್ ಕ್ಯಾಪಿಟಲ್‌ ಫಂಡ್‌) ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ. ಈ ಕ್ರಮವು ದೇಶದಲ್ಲಿ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪ್ರಗತಿಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.