ADVERTISEMENT

ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ: ಪಿಐಎಲ್‌ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 16:42 IST
Last Updated 24 ಆಗಸ್ಟ್ 2023, 16:42 IST
   

ಬೆಂಗಳೂರು: ‘ರಾಷ್ಟ್ರೀಯ ವನ್ಯಜೀವಿ ಮಂಡಳಿ ಅಭಿಪ್ರಾಯದಂತೆ ಹುಬ್ಬಳ್ಳಿ-ಅಂಕೋಲಾ ಮಧ್ಯದ ಬ್ರಾಡ್‌ಗೇಜ್‌ ರೈಲು ಮಾರ್ಗದ ಕುರಿತಾದ ಪರಿಷ್ಕೃತ ಯೋಜನೆಯನ್ನು ಸಲ್ಲಿಸಲಾಗುವುದು‘ ಎಂಬ ನೈಋುತ್ಯ ರೈಲ್ವೆ ವಲಯ ಸಲ್ಲಿಸಿದ ಪ್ರಮಾಣ ಪತ್ರವನ್ನು ಪರಿಗಣಿಸಿರುವ ಹೈಕೋರ್ಟ್‌; ಯೋಜನೆ ಪ್ರಶ್ನಿಸಿ ಪರಿಸರವಾದಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಲೇವಾರಿ ಮಾಡಿದೆ.

ಹುಬ್ಬಳ್ಳಿ-ಅಂಕೋಲಾ ಮಧ್ಯದ 164.44 ಕಿ.ಮಿ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಕರ್ನಾಟಕ ವನ್ಯಜೀವಿ ಮಂಡಳಿ 2020ರ ಮಾರ್ಚ್‌ 20ರಂದು ನೀಡಿದ್ದ ಅನುಮತಿಯನ್ನು ಆಕ್ಷೇಪಿಸಿ, ‘ಪ್ರಾಜೆಕ್ಟ್ ವೃಕ್ಷ ಫೌಂಡೇಷನ್‌‘ ಮತ್ತು ಬೆಳಗಾವಿಯ ಗಿರಿಧರ್‌ ಕುಲಕರ್ಣಿ ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರೈಲ್ವೆ ಸಚಿವಾಲಯದ ಪರ ವಕೀಲರು, ನೈಋತ್ಯ ರೈಲ್ವೆ ವಲಯದ ಉಪ ಮುಖ್ಯ ಎಂಜಿನಿಯರ್‌ ಸಿ.ಪಿ.ರೆಡ್ಡಿ ಅವರ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. 

ADVERTISEMENT

ಪ್ರಮಾಣ ಪತ್ರದಲ್ಲಿ ಏನಿದೆ?: ‘ಯೋಜನೆಯನ್ನು 1996-97ರಲ್ಲಿಯೇ ಅನುಮೋದಿಸಲಾಗಿತ್ತು. ಆದರೆ, ಹಲವು ವರ್ಷ ಕಳೆದರೂ ಪೂರ್ಣಗೊಳಿಸಲಾಗಿಲ್ಲ. ಹುಬ್ಬಳ್ಳಿಯಿಂದ 34 ಕಿ.ಮೀ. ದೂರದವರೆಗೆ ಅರಣ್ಯ ಪ್ರದೇಶವಿಲ್ಲದ ಜಾಗದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಉಳಿದ ಮಾರ್ಗವು ಅರಣ್ಯದಲ್ಲಿ ಹಾದು ಹೋಗುವುದರಿಂದ ಯೋಜನೆಯ ಅನುಮತಿಗಳಿಗೆ ಕಾಯಲಾಗುತ್ತಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಾಗುತ್ತಿಲ್ಲ ಮತ್ತು ಯೋಜನಾ ವೆಚ್ಚ ಹೆಚ್ಚಾಗುತ್ತಿದೆ’ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

‘ಹೈಕೋರ್ಟ್‌ ಆದೇಶದಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್‌ಬಿಡಬ್ಲ್ಯೂಎಲ್‌) ಸಮಿತಿ ರಚನೆ ಮಾಡಿತ್ತು. ಈ ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ಈಗಾಗಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಸಮಿತಿ ನಡೆಸಿದ ಈ ಸಭೆಯಲ್ಲಿ ರೈಲ್ವೆ ಸಚಿವಾಲಯದ ಅಧಿಕಾರಿಗಳೂ ಭಾಗವಹಿಸಿದ್ದರು. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಕುರಿತು ರೈಲ್ವೆ ಸಚಿವಾಲಯದ ಪರವಾಗಿ ಪ್ರಸ್ತಾವ ಮಂಡಿಸಲಾಗಿದೆ. ಸಮಿತಿಯ ಶಿಫಾರಸುಗಳ ಅನ್ವಯ ಪರಿಷ್ಕೃತ ಯೋಜನಾ ವರದಿ ಸಲ್ಲಿಸುವಂತೆ ರೈಲ್ವೆ ಇಲಾಖೆಗೆ ಸೂಚಿಸಲಾಗಿದೆ‘ ಎಂದು ವಿವರಿಸಲಾಗಿದೆ.

‘ಹುಬ್ಬಳ್ಳಿಯ ನೈಋುತ್ಯ ರೈಲ್ವೆ ವಲಯವು, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ನಿರ್ದೇಶನಗಳನ್ನು ಪಾಲಿಸಬೇಕಿದೆ ಮತ್ತು ಡೆಹ್ರಾಡೂನ್‌ ಭಾರತೀಯ ವನ್ಯಜೀವಿ ಕೇಂದ್ರದ ಜೊತೆ ಸಮಾಲೋಚನೆ ನಡೆಸಿ ಯೋಜನೆಯ ಮಿಟಿಗೇಷನ್‌ ಪ್ಲಾನ್‌ (ಗಂಭೀರತೆ ತಗ್ಗಿಸುವ) ಅನ್ನು ಸಿದ್ಧಪಡಿಸಬೇಕು. ಎನ್‌ಬಿಡಬ್ಲ್ಯೂಎಲ್‌, ಕೇಂದ್ರ ಪರಿಸರ ಮತ್ತು ಅರಣ್ಯ ಹಾಗೂ ಹವಾಮಾನ ವೈಪರೀತ್ಯ ಸಚಿವಾಲಯದ ನಿರ್ದೇಶನಗಳನ್ನು ಪಾಲಿಸಲಾಗುವುದು ಮತ್ತು ಅಗತ್ಯ ಅನುಮತಿಗಳನ್ನು ಪಡೆದ ನಂತರವೇ ಯೋಜನೆಯನ್ನು ಜಾರಿಗೊಳಿಸಲಾಗುವುದು‘ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.