ADVERTISEMENT

ರೈಲ್ವೆ ಪರೀಕ್ಷೆಯಲ್ಲಿ ಜನಿವಾರ, ಮಾಂಗಲ್ಯ ತೆಗೆಸದಂತೆ ಸಚಿವ ವಿ. ಸೋಮಣ್ಣ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2025, 9:52 IST
Last Updated 28 ಏಪ್ರಿಲ್ 2025, 9:52 IST
ಸಚಿವ ವಿ. ಸೋಮಣ್ಣ
ಸಚಿವ ವಿ. ಸೋಮಣ್ಣ   

ಮಂಗಳೂರು: ರೈಲ್ವೆ ನೇಮಕಾತಿ ಮಂಡಳಿಯು ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವಾಗ ಧಾರ್ಮಿಕ ಸಂಕೇತಗಳಾದ ಮಂಗಳಸೂತ್ರ, ಜನಿವಾರ ಮೊದಲಾವುಗಳನ್ನು ಧರಿಸುವಂತಿಲ್ಲ ಎಂದು ಪರೀಕ್ಷೆ ಪ್ರವೇಶಪತ್ರದಲ್ಲಿ ಉಲ್ಲೇಖಿಸಿತ್ತು.

ಇದು ದಕ್ಷಿಣ ಕನ್ನಡ ಸೇರಿದಂತೆ ಹಲವು ಕಡೆ ವಿವಾದವಾಗಿದ್ದರಿಂದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇದರ ಬಗ್ಗೆ ಇಂದು ಸ್ಪಷ್ಟನೆ ನೀಡಿದ್ದಾರೆ.

ಜನಿವಾರ, ಮಾಂಗಲ್ಯ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ವಸ್ತುವನ್ನು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ವಿ. ಸೋಮಣ್ಣ ಎಕ್ಸ್ ಖಾತೆ ಮೂಲಕ ಹೇಳಿದ್ದಾರೆ.

ADVERTISEMENT

ಏಪ್ರಿಲ್ 28, 29 ಮತ್ತು 30 ರಂದು ರೈಲ್ವೆ ಇಲಾಖೆಯಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ. ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂಬ ವಿಷಯವನ್ನು ಪರೀಕ್ಷಾ ನಿಯಮದಲ್ಲಿ ಉಲ್ಲೇಖಿಸಲಾಗಿದೆಯೆಂಬ ದೂರುಗಳು ನನಗೆ ಬಂದಿದೆ. ಈ ಬಗ್ಗೆ, ಸಂಸದರು, ಶಾಸಕರು ಇದನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವಿವಿಧ ಸಂಘಟನೆಗಳು ಈ ಬಗ್ಗೆ ನನ್ನ ಗಮನವನ್ನು ಸೆಳೆದಿದ್ದರು ಎಂದು ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಗೊಂದಲ ನಿವಾರಿಸಲಾಗಿದೆ ಎಂದು ಹೇಳಿದ್ದಾರೆ.

ಇತರ ಎಲ್ಲಾ ಪರೀಕ್ಷಾ ನಿಯಮವನ್ನು ಪಾಲಿಸಿ, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಸೂಚಿಸಲಾಗಿದೆ. ಪರೀಕ್ಷಾ ಅಭ್ಯರ್ಥಿಗಳು ಸಹ ನಿಯಮಾನುಸಾರ ಪರೀಕ್ಷೆ ಬರೆಯುವಂತೆ ಮನವಿ ಮಾಡುತ್ತೇನೆ. ಅಭ್ಯರ್ಥಿಗಳು ಗೊಂದಲಕ್ಕೀಡಾಗಬಾರದೆಂದು ಮನವಿ ಮಾಡಿದ್ದಾರೆ.

ಮಾರ್ಗಸೂಚಿಗೆ ವಿಎಚ್‌ಪಿ ಸೇರಿದಂತೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ವಿರೋಧ ವ್ಯಕ್ತಪಡಿಸಿದ್ದರು.

ರಾಜ್ಯದಲ್ಲಿ ಇತ್ತೀಚಿಗೆ ನಡೆದ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯುವ ಸಂದರ್ಭದಲ್ಲಿ ಕೆಲ ಅಭ್ಯರ್ಥಿಗಳ ಜನಿವಾರ ತೆಗೆಸಿದ್ದು ದೊಡ್ಡ ವಿವಾದವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.