ADVERTISEMENT

‘ಕರ್ನಾಟಕ: ವರ್ಷಕ್ಕೆ 168 ಕಿ.ಮೀ. ರೈಲ್ವೆ ಮಾರ್ಗ ಪೂರ್ಣ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 15:45 IST
Last Updated 21 ಡಿಸೆಂಬರ್ 2022, 15:45 IST
   

ನವದೆಹಲಿ: ಕರ್ನಾಟಕದಲ್ಲಿ 2014–22ರ ಅವಧಿಯಲ್ಲಿ 1,347 ಕಿ.ಮೀ. ರೈಲು ಮಾರ್ಗ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಹಾವೇರಿ ಸಂಸದ ಶಿವಕುಮಾರ್ ಸಿ.ಉದಾಸಿ ಬುಧವಾರ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ‘ಈ ಅವಧಿಯಲ್ಲಿ 303 ಕಿ.ಮೀ ಹೊಸ ಮಾರ್ಗದ ಕಾಮಗಾರಿ ಹಾಗೂ 1,044 ಕಿ.ಮೀ. ದ್ವಿಪಥದ ಕಾಮಗಾರಿ ಪೂರ್ಣಗೊಂಡಿದೆ’ ಎಂದಿದ್ದಾರೆ.

ಈ ಅವಧಿಯಲ್ಲಿ ಪ್ರತಿವರ್ಷ 168 ಕಿ.ಮೀ. ಕಾಮಗಾರಿಯನ್ನು ಮುಗಿಸಲಾಗಿದೆ. 2009–14ರ ಅವಧಿಯಲ್ಲಿ ಪ್ರತಿವರ್ಷ 113 ಕಿ.ಮೀ. ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಪ್ರಮಾಣ ಶೇ 49ರಷ್ಟು ಹೆಚ್ಚಳ ಆಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಕರ್ನಾಟಕದಲ್ಲಿ ₹49,087 ಕೋಟಿ ವೆಚ್ಚದ 4,330 ಕಿ.ಮೀ. ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಇದರಲ್ಲಿ 21 ಹೊಸ ಯೋಜನೆಗಳು ಹಾಗೂ 11 ದ್ವಿಪಥ ಕಾಮಗಾರಿಗಳು ಸೇರಿವೆ. ₹16,258 ಕೋಟಿ ವೆಚ್ಚದ 1,305 ಕಿ.ಮೀ. ಪೂರ್ಣಗೊಂಡಿದೆ’ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಹೊಸ ಮಾರ್ಗಗಳ ನಿರ್ಮಾಣ, ದ್ವಿಪಥ, ಗೇಜ್‌ ಪರಿವರ್ತನೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಒದಗಿಸುತ್ತಿರುವ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2014–19ನೇ ಸಾಲಿನಲ್ಲಿ ಪ್ರತಿವರ್ಷ ₹2,702 ಕೋಟಿ ಒದಗಿಸಲಾಗಿದೆ. 2019–20ರಲ್ಲಿ ₹3,386 ಕೋಟಿ, 2020–21ರಲ್ಲಿ ₹4,220 ಕೋಟಿ, 2021–22ರಲ್ಲಿ ₹4,227 ಕೋಟಿ ಒದಗಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರಗಳಿಂದ ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಭೂಮಿ ಬಳಕೆಗೆ ಅನುಮೋದನೆ, ಮೂಲಸೌಕರ್ಯಗಳ ಸ್ಥಳಾಂತರ, ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯ ಸರ್ಕಾರಗಳಿಂದ ವೆಚ್ಚದಲ್ಲಿ ಪಾಲು ಭರಿಸುವಿಕೆ ಮತ್ತಿತರ ಅಂಶಗಳು ಕಾಮಗಾರಿಯ ಮೇಲೆ ಪರಿಣಾಮ ಬೀರುತ್ತದೆ. ಈ ಅನುಮೋದನೆಗಳು ವಿಳಂಬವಾದರೆ ಕಾಮಗಾರಿಯೂ ವಿಳಂಬವಾಗುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.