ADVERTISEMENT

ಕೋವಿಡ್‌ ಸಂಕಷ್ಟ: ಪ್ರಯಾಣಿಕರ ಜೇಬಿಗೆ ರೈಲ್ವೆ ‘ಕತ್ತರಿ’ ಸೇವೆ

ವಿಜಯಕುಮಾರ್ ಎಸ್.ಕೆ.
Published 31 ಆಗಸ್ಟ್ 2021, 22:11 IST
Last Updated 31 ಆಗಸ್ಟ್ 2021, 22:11 IST
ರೈಲು
ರೈಲು   

ಬೆಂಗಳೂರು: ರೈಲು ಪ್ರಯಾಣ ದರವನ್ನು ಘೋಷಣೆ ಮಾಡಿ ನೇರವಾಗಿ ಏರಿಕೆ ಮಾಡದಿದ್ದರೂ ಪರೋಕ್ಷವಾಗಿ ಪ್ರಯಾಣಿಕರ ಜೇಬಿಗೆ ಕೈ ಹಾಕಿದೆ.

ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ, ಎಕ್ಸ್‌ಪ್ರೆಸ್ ರೈಲುಗಳನ್ನು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತಿಸಲಾಗಿದೆ. 200 ಕಿಲೋ ಮೀಟರ್‌ಗೂ ಹೆಚ್ಚಿನ ದೂರ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಹೀಗೆ ಮಾರ್ಪಡಿಸಿ ಶೇ 30ರಷ್ಟು ದರ ಏರಿಕೆ ಮಾಡಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಕೆಲವೆಡೆಗೆ ವಿಶೇಷ ರೈಲುಗಳ ಸಂಚಾರ ಆರಂಭಿಸಲಾಗಿದೆ. ಬೇರೆ ರೈಲುಗಳಿಗೆ ಹೋಲಿಸಿದರೆ ಅವುಗಳಲ್ಲಿನ ಪ್ರಯಾಣ ದರ ಶೇ 30ರಷ್ಟು ಹೆಚ್ಚಿದೆ. ಹೊರ ರಾಜ್ಯಗಳ ರೈಲುಗಳಲ್ಲೂ ಪರೋಕ್ಷವಾಗಿ ಪ್ರಯಾಣದರ ಏರಿಕೆಯಾಗಿದೆ.

ADVERTISEMENT

ಇನ್ನೊಂದೆಡೆ ನಿಲ್ದಾಣ ಪ್ರವೇಶಕ್ಕೆ (ಪ್ಲಾಟ್‌ಫಾರಂ ಟಿಕೆಟ್) ಕೋವಿಡ್ ಸಂದರ್ಭದಲ್ಲಿ ₹50 ದರ ನಿಗದಿ ಮಾಡಲಾಗಿತ್ತು. ಈಗ ಮತ್ತೆ ₹10ಕ್ಕೆ ಇಳಿಸಲಾಗಿದೆ. 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಶೇ 50ರಷ್ಟು ಮತ್ತು 60 ವರ್ಷ ಮೇಲ್ಪಟ್ಟ ಪುರುಷರಿಗೆ ಪ್ರಯಾಣ ದರದಲ್ಲಿ ಶೇ 40ರಷ್ಟು ರಿಯಾಯಿತಿ ಇತ್ತು. ಆದರೆ, ಈಗ ಅದನ್ನು ಹಿಂಪಡೆಯಲಾಗಿದೆ.

ಟೋಲ್‌ಗಳಲ್ಲೂ ಹೆಚ್ಚಿನ ದರ
ಟೋಲ್ ರಸ್ತೆಗಳಲ್ಲಿ ಸುಂಕ ಸಂಗ್ರಹ ಈಗ ಫಾಸ್ಟ್‌ಟ್ಯಾಗ್ ಮೂಲಕ ಆನ್‌ಲೈನ್‌ನಲ್ಲೇ ನಡೆಯುತ್ತಿದೆ. ಇಲ್ಲಿ ವಾಹನ ಸವಾರರ ಕಣ್ಕಟ್ಟಿ ಹೆಚ್ಚಿನ ಸುಂಕ ಸಂಗ್ರಹಿಸಲಾಗುತ್ತಿದೆ.

ವಾಹನಗಳ ಮಾಲೀಕರು ಫಾಸ್ಟ್‌ಟ್ಯಾಗ್‌ಗೆ ರೀಚಾರ್ಜ್ ಮಾಡಿಕೊಂಡಿದ್ದರೆ ಸುಂಕ ಸಂಗ್ರಹ ಕೇಂದ್ರ ದಾಟುವಾಗ ನಿಗದಿಯಷ್ಟೇ ದರ ಪಾವತಿಯಾಗುತ್ತದೆ. ಎಷ್ಟು ಪಾವತಿಯಾಗಿದೆ ಎಂಬುದನ್ನು ತಕ್ಷಣಕ್ಕೆ ವಾಹನ ಚಾಲಕರು ನೋಡಿಕೊಳ್ಳುವುದಿಲ್ಲ. ಇದರ ದುರ್ಲಾಭವನ್ನು ಸುಂಕ ಸಂಗ್ರಹ ಕಂಪನಿಗಳು ಮಾಡಿಕೊಳ್ಳುತ್ತಿವೆ. ₹40 ದರ ಇದ್ದ ಕಡೆ ₹50 ಅಥವಾ ₹55 ಪಾವತಿ ಮಾಡಿಕೊಳ್ಳಲಾಗುತ್ತದೆ ಎಂಬ ಆರೋಪಗಳಿವೆ.

ಇದು ಎಲ್ಲಾ ಟೋಲ್‌ಗಳಲ್ಲೂ ನಡೆಯುತ್ತಿಲ್ಲ, ಕೆಲವು ಟೋಲ್‌ಗಳಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಫಾಸ್ಟ್‌ಟ್ಯಾಗ್ ಹೊಸ ಪದ್ಧತಿ ಜಾರಿಗೆ ತಂದ ಮೇಲೆ, ಫಾಸ್ಟ್‌ಟ್ಯಾಗ್ ಇಲ್ಲದೇ ಇರುವವರು, ರೀಚಾರ್ಜ್ ಆಗದೇ ಇರುವವರಿಂದ ನಿಗದಿತ ದರಕ್ಕಿಂತ ದುಪ್ಪಟ್ಟು ದರ ಪಡೆಯಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.