ಮಳೆ
ಬೆಂಗಳೂರು/ಹುಬ್ಬಳ್ಳಿ/ಮೈಸೂರು: ‘ಫೆಂಜಲ್’ ಚಂಡಮಾರುತದ ಪರಿಣಾಮ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸೋಮವಾರ ದಿನವಿಡೀ ಮಳೆಯಾಗಿದೆ. ಹಗಲು ಹೊತ್ತಿನಲ್ಲೇ ತಾಪಮಾನ ಕುಸಿದಿದ್ದರಿಂದ ರಾಜಧಾನಿ ಥಂಡಿಯಿಂದ ನಡುಗಿತು. ಕೆಲವೆಡೆ ಭತ್ತ ಕಟಾವು ಹಂತಕ್ಕೆ ಬಂದಿದ್ದರೆ ಹಲವು ಕಡೆ ಕಟಾವು ಮುಗಿದು ಭತ್ತವನ್ನು ಒಣಗಿಸುವ ಕೆಲಸ ಸಾಗಿದೆ. ಈ ಹಂತದಲ್ಲಿ ಮಳೆಯಾಗಿರುವುದು ಕೃಷಿಕರಲ್ಲಿ ಆತಂಕ ಮೂಡಿಸಿದೆ.
ಡಿ.3ರಂದು ಭಾರಿ ಮಳೆಯಾಗಲಿದೆ ಎಂಬ ಮುನ್ಸೂಚನೆ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಗಳ ವಿವಿಧೆಡೆಯೂ ಜೋರು ಮಳೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ಆಯಾ ಜಿಲ್ಲಾಡಳಿತಗಳಿಂದ ಅಂಗನವಾಡಿ ಕೇಂದ್ರಗಳು, ಶಾಲೆ– ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಂಗಳವಾರವೂ (ಡಿ.3) ರಜೆ ಘೋಷಿಸಲಾಗಿದೆ.
ವಿಲ್ಲುಪುರಂ (ಪಿಟಿಐ): ಫೆಂಜಲ್ ಚಂಡಮಾರುತದ ಪರಿಣಾಮ, ಉತ್ತರ ತಮಿಳುನಾಡಿನ ವಿಲ್ಲುಪುರಂನಲ್ಲಿ ಸೋಮವಾರ ನಿರಂತರವಾಗಿ ಮಳೆ ಸುರಿದಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಸೇತುವೆಗಳು ಮತ್ತು ರಸ್ತೆಗಳು ಜಲಾವೃತವಾಗಿದ್ದು ಹಲವು ಗ್ರಾಮಗಳು ಮತ್ತು ಕಾಲೊನಿಗಳು ಸಂಪರ್ಕ ಕಳೆದುಕೊಂಡಿವೆ. ನೂರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿ, ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿದೆ.
ಪಶ್ಚಿಮ ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲೂ ಕಳೆದ ಎರಡು ದಶಕಗಳಲ್ಲಿ ಕಂಡುಕೇಳರಿಯದ ಮಳೆ ಸುರಿದಿದೆ. 24 ತಾಸುಗಳಲ್ಲಿ ಕೃಷ್ಣಗಿರಿಯ ಉತಂಗರೈನಲ್ಲಿ 50 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ.
ವೆಲ್ಲುಪುರಂನಲ್ಲಿ 42 ಸೆಂ.ಮೀ, ಧರ್ಮಪುರಿಯ ಹರೂರಿನಲ್ಲಿ 33 ಸೆಂ.ಮೀ, ಕಡಲೂರು ಮತ್ತು ತಿರುವಣ್ಣಾಮಲೈನಲ್ಲಿ 16 ಸೆಂ.ಮೀ ಮಳೆಯಾಗಿದೆ.
ಉತಂಗರೈನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರು ಮತ್ತು ವ್ಯಾನ್‌ಗಳು ಸೇರಿದಂತೆ ಹಲವು ವಾಹನಗಳು ನೀರಿನ ರಭಸಕ್ಕೆ ತಗ್ಗು ಪ್ರದೇಶದತ್ತ ತೇಲಿಹೋಗಿವೆ.
ಕೇರಳದಲ್ಲಿ ಇನ್ನೂ 5 ದಿನ ಮಳೆ(ತಿರುವನಂತಪುರ ವರದಿ): ಕೇರಳದಲ್ಲಿ ಮಂಗಳವಾರ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಸೋಮವಾರ ಕೇರಳದ ಹಲವೆಡೆ ಸಾಧಾರಣ ಮಳೆಯಾಗಿದೆ. ಉತ್ತರ ಮತ್ತು ಕೇಂದ್ರದ ಹಲವು ಪ್ರದೇಶಗಳಲ್ಲಿ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಐದು ದಿನ ಈ ಭಾಗದಲ್ಲಿ ಗುಡುಗು ಸಹಿತ ಸಾಧರಣ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ. ಕೇರಳದ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ನಾಲ್ಕು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.