ಮಂಜುನಾಥ ಭಂಡಾರಿ
ಬೆಂಗಳೂರು: ‘ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಹಾನಿ ಕುರಿತು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಪತ್ರ ಬರೆದಿದ್ದಾರೆ.
‘ನದಿ ತೀರಗಳಲ್ಲಿ ಪ್ರವಾಹ ತಡೆಗೆ ಕ್ರಮಕೈಗೊಳ್ಳಬೇಕು. ವಿಪತ್ತು ನಿರ್ವಹಣಾ ದಳಗಳ ಜೊತೆಗೆ ಪೊಲೀಸ್, ಗೃಹರಕ್ಷಕ ದಳ ಸೇರಿದಂತೆ ಸ್ವಯಂ ಸೇವಕರನ್ನು ಬಳಸಿಕೊಂಡು ಜನರ ರಕ್ಷಣೆಗೆ ನೆರವಾಗಬೇಕು. ಪ್ರಾಕೃತಿಕ ದುರಂತಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಿ ಜನ ಜಾನುವಾರುಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆದೇಶ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ಕಡಲ ತೀರದಲ್ಲಿ ಇರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕು. ಸಹಾಯವಾಣಿ ಕೇಂದ್ರ ಆರಂಭಿಸಬೇಕು. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟು ಪರಿಸ್ಥಿತಿ ನಿಭಾಯಿಸುವ ಮೂಲಕ ಜೀವಹಾನಿ ತಡೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇದಕ್ಕೆ ಸಂಬಂಧಪಟ್ಟಂತೆ ಅಗತ್ಯವಿರುವ ಅನುದಾನವನ್ನು ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಿ ತುರ್ತು ಅವಶ್ಯಕತೆಗಾಗಿ ಸ್ಥಳೀಯ ಸಂಸ್ಥೆಗಳ ಖಾತೆಗಳಿಗೂ ಜಮೆ ಮಾಡಲು ಸೂಚಿಸಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.
‘ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಸೇರಿದಂತೆ ಗುಡ್ಡಗಾಡಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತವಾಗುತ್ತಿದೆ. ರಸ್ತೆ ಸಂಪರ್ಕ ಕಡಿತವಾಗಿದ್ದು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತುರ್ತು ಕ್ರಮಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ. ಸರ್ಕಾರಿ ಶಾಲೆ ಕಟ್ಟಡ, ತರಗತಿಗಳು ಸುಸ್ಥಿತಿಯಲ್ಲಿ ಇವೆಯೇ ಎಂಬ ಬಗ್ಗೆ ಸ್ಥಳೀಯ ಆಡಳಿತ ಪರಾಮರ್ಶೆ ನಡೆಸಬೇಕು. ಹೆದ್ದಾರಿಗಳಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸುವುದರ ಜೊತೆಗೆ ಸಾರ್ವಜನಿಕರಿಗೆ ಸಮಸ್ಯೆ ಮತ್ತು ಸವಾಲುಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.