ADVERTISEMENT

ರಾಜ್ಯದ ವಿವಿಧೆಡೆ ಉತ್ತಮ ಮಳೆ

ಬೀದರ್‌ನಲ್ಲಿ ಮನೆ ಗೋಡೆ ಕುಸಿದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 16:55 IST
Last Updated 21 ಜುಲೈ 2021, 16:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಕೆಲವೆಡೆ,ಕರಾವಳಿ, ಮಲೆನಾಡು ಭಾಗದಲ್ಲಿ ಬುಧವಾರ ಉತ್ತಮ ಮಳೆಯಾಗಿದೆ.

ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಕುಮಾರಚಿಂಚೋಳಿ ಗ್ರಾಮದಲ್ಲಿ ಮನೆಗೋಡೆ ಕುಸಿದು ಪಾರ್ವತಿ ವೈಜಿನಾಥ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಿಳೆಯ ಪತಿ ಮತ್ತು ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.

ಚಿಟಗುಪ್ಪದಲ್ಲಿ ಕವಿತಾ ನೂರೊಂದಪ್ಪ ಅವರ ಮನೆ ಗೋಡೆ ಕುಸಿದಿದೆ. ಬೀದರ್‌ ಓಲ್ಡ್‌ಸಿಟಿಯ ಶಹಾಗಂಜ್‌ ಕಮಾನ್ ಸಮೀಪ ಕೋಟೆ ಗೋಡೆಯ ಮಣ್ಣು ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ.

ADVERTISEMENT

ಕಲಬುರ್ಗಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಆಳಂದ ತಾಲ್ಲೂಕಿನ ಅಮರ್ಜಾ ನದಿಗೆ ಸೇರುವ ಮಂಟಗಿ ಹಳ್ಳ ತುಂಬಿ ಹರಿದಿದೆ.

ಬೀಳುತ್ತಿರುವ ಮಣ್ಣಿನ ಮನೆಗಳು: ಬಾಗಲಕೋಟೆಯ ಹುನಗುಂದ ತಾಲ್ಲೂಕಿನಾದ್ಯಂತ ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಕೂಡಲಸಂಗಮ ಹಾಗೂ ಸುತ್ತಮುತ್ತಲ್ಲಿನ ಗ್ರಾಮಗಳಲ್ಲಿ ಮಣ್ಣಿನ ಮನೆಗಳು ಸೋರುತ್ತಿದ್ದು, ಕೆಲವೆಡೆ ಬೀಳಲಾರಂಭಿಸಿವೆ.

ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಲ್ಲಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಒಳಹರಿವು ಏರಿಕೆಯಾಗುತ್ತಿದೆ. ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು ಹೆಚ್ಚುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜನರು ನದಿಗೆ ಇಳಿಯದಂತೆ ತಾಲ್ಲೂಕು ಆಡಳಿತ ಸೂಚನೆ ನೀಡಿವೆ.

ಪಶ್ಚಿಮ ಘಟ್ಟ ಪ್ರದೇಶದ ಕಣಕುಂಬಿ ಮತ್ತು ಭೀಮಗಡ ಅರಣ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳು ಮತ್ತು ಅವುಗಳ ಜಲಮೂಲಗಳು ಉಕ್ಕಿ ಹರಿಯಲಾರಂಭಿಸಿದ್ದು ಕಣಕುಂಬಿ ಮತ್ತು ಭೀಮಗಡ ಅರಣ್ಯ ವಲಯದ ಬಹುತೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಮನೆಯ ಗೋಡೆ ಕುಸಿದು ಮೂವರಿಗೆ ಗಾಯ: ವಿಜಯನಗರ ಜಿಲ್ಲೆಯ ಅರಸೀಕರೆ ಹೋಬಳಿ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿದಿದೆ. ಇಲ್ಲಿನ ನಾಗತಿಕಟ್ಟೆ ತಾಂಡಾದಲ್ಲಿ ಮಂಗಳವಾರ ರಾತ್ರಿ ಮನೆಯ ಗೋಡೆ ಕುಸಿದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ಶೇಖರನಾಯ್ಕ, ಅವರ ಪತ್ನಿ ಲಕ್ಷ್ಮೀಬಾಯಿ, ಪುತ್ರಿ ತೇಜಸ್ವಿನಿ ಗಾಯಗೊಂಡವರು.

ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ನಾಲ್ಕು ಮನೆಗಳಿಗೆ ಹಾನಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಮನೆಗಳಿಗೆ ಹಾನಿಯಾಗಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹೇಮಾವತಿ, ಭದ್ರಾ, ತುಂಗಾ ಹೊಳೆಗಳು ಮೈದುಂಬಿಕೊಂಡಿವೆ.

ಉಡುಪಿ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಹೆಬ್ರಿ ತಾಲ್ಲೂಕಿನ ಮಡಾಮಕ್ಕಿ ಗ್ರಾಮದಲ್ಲಿ ಮನೆಗೆ ಹಾನಿಯಾಗಿದೆ. ಜುಲೈ 26ರವರೆಗೆ ಬಿರುಸಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಸೂರ್ಲಬ್ಬಿ, ಗರ್ವಾಲೆ, ಮಾದಾಪುರ, ಹಟ್ಟಿಹೊಳೆ ಹಾಗೂ ಮುಕ್ಕೊಡ್ಲು ಭಾಗದಲ್ಲಿ ಉತ್ತಮ ಮಳೆಯಾಗಿದ್ದರೆ, ಹಾಸನ ಜಿಲ್ಲೆಯ ವಿವಿಧೆಡೆ ಜಿಟಿಜಿಟಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.