ಕೊಡಗು ಜಿಲ್ಲೆಯ ಭಾಗಮಂಡಲದ ತ್ರಿವೇಣಿ ಸಂಗಮ ಭಾನುವಾರ ಭರ್ತಿಯಾಗಿ, ಪುಷ್ಪೋದ್ಯನ ಜಲಾವೃತಗೊಂಡಿದೆ.
ಮೈಸೂರು/ಮಡಿಕೇರಿ: ರಾಜ್ಯದ ಹಲವೆಡೆ ಭಾನುವಾರ ಜಿಟಿಜಿಟಿ ಮಳೆಯಾಗಿದ್ದರೆ, ಕೆಲವೆಡೆ ಮಳೆ ಅಬ್ಬರಿಸಿ ಸುರಿದಿದೆ. ರಸ್ತೆಗಳು, ಸೇತುವೆಗಳು ಜಲಾವೃತವಾಗಿದೆ, ಜಲಾಶಯಗಳು ಮೈದುಂಬುತ್ತಿವೆ.
ಮೈಸೂರು ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಇಡೀ ದಿನ ಜಿಟಿಜಿಟಿ ಮಳೆ ಬಿದ್ದಿತು. ಹುಣಸೂರು ತಾಲ್ಲೂಕಿನ ಹನಗೋಡು –ಪಂಚವಳ್ಳಿ ಮುಖ್ಯ ರಸ್ತೆ ಸಂಚಾರ ಬಂದ್ ಆಗಿದ್ದು, ಹೆಬ್ಬಾಳ ಗ್ರಾಮದ ಸೇತುವೆ ಮೇಲೆ ನೀರು ಹರಿಯಿತು. ಇದರಿಂದಾಗಿ ಕೆಲ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಚಾಮರಾಜನಗರ ಜಿಲ್ಲೆಯಾದ್ಯಂತ ಶನಿವಾರ ಮಧ್ಯಾಹ್ನದಿಂದ ಬಿರುಗಾಳಿ ಸಹಿತ ಮಳೆ ಸುರಿಯಿತು. ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ 197 ವಿದ್ಯುತ್ ಕಂಬಗಳು ಬಿದ್ದಿದ್ದು, ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳು ಕತ್ತಲಲ್ಲಿ ಮುಳುಗಿವೆ. ಮಡಿಕೇರಿಗೆ ಕುಡಿಯುವ ನೀರು ಪೂರೈಸುವ ಕೂಟುಹೊಳೆ ಕೂಡ ಇದೇ ಮೊದಲಿಗೆ ಮೇನಲ್ಲೇ ಭರ್ತಿಯಾಗಿ ಕೋಡಿ ಬಿದ್ದಿದೆ.
ಮಡಿಕೇರಿ ತಾಲ್ಲೂಕು ಬಲಮುರಿಯಲ್ಲಿ ಕಿರು ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಮತ್ತೊಂದು ಸೇತುವೆ ಇರುವುದರಿಂದ ಸಂಚಾರಕ್ಕೆ ತೊಂದರೆಯಾಗಿಲ್ಲ.
ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.
ಮಳೆಯಿಂದಾಗಿ ಭಾನುವಾರ ಸಂಜೆ ರಸ್ತೆ ಬದಿಯ ಮಣ್ಣು ಕುಸಿದಿದ್ದರಿಂದ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಬಳಿ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಸಕಲೇಶಪುರ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗಿದೆ. ಸಕಲೇಶಪುರ ಬಸ್ ನಿಲ್ದಾಣದ ಬಳಿ ಹೋಟೆಲ್‍ನ ಗೋಡೆ ಕುಸಿದು, ಮೂವರು ಮಹಿಳೆಯರು ಹಾಗೂ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಗಾಳಿಯೊಂದಿಗೆ ಮುಸಲಧಾರೆಯಾಗಿದ್ದು ಗ್ರಾಮೀಣ ಭಾಗದ ಹಲವು ಪ್ರದೇಶಗಳು ಜಲಾವೃತವಾಗಿವೆ.
ಮೂಡಿಗರೆ ತಾಲ್ಲೂಕಿನ ಬಣಕಲ್ ಸಮೀಪದ ರಾಮಣ್ಣನ ಗಂಡಿ ಮತ್ತು ಚಕ್ಕಮಕ್ಕಿ ಎಂಬಲ್ಲಿ ಎರಡು ಕಾರುಗಳು ಹೇಮಾವತಿ ಉಪನದಿಗೆ ಉರುಳಿದ್ದವು. ಕಾರಿನಲ್ಲಿದ್ದ ಎಲ್ಲರನ್ನೂ ಸ್ಥಳೀಯರು ರಕ್ಷಿಸಿದರು. ಇದೇ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಮತ್ತೊಂದು ಕಾರು ಹೆದ್ದಾರಿಯ ರಸ್ತೆ ಪಕ್ಕಕ್ಕೆ ಉರುಳಿದೆ. ಕಾರಿನಲ್ಲಿದ್ದ ಯಾರಿಗೂ ತೊಂದರೆಯಾಗಿಲ್ಲ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ನಗರಸಭೆಯ ಆವರಣ ಗೋಡೆ ಕುಸಿದು ಬಿದ್ದಿದೆ. ಕಲ್ಲು ಮತ್ತು ಮಣ್ಣು ಬಿದ್ದು ಎರಡು ಆಟೊಗಳಿಗೆ ಹಾನಿಯಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ, ಹೆಬ್ರಿ, ಕಾರ್ಕಳ, ಕಾಪು, ಬೈಂದೂರು ವ್ಯಾಪ್ತಿಯಲ್ಲೂ ಗಾಳಿ ಸಹಿತ ಮಳೆಯಾಗಿದೆ. ಕೆಲವು ಪ್ರದೇಶಗಳು ಜಲಾವೃತವಾಗಿವೆ.
ರಾಯಚೂರು: ಜಿಲ್ಲೆಯ ವಿವಿಧೆಡೆ ಮಧ್ಯಾಹ್ನ ಹಾಗೂ ಸಂಜೆ ಸಾಧಾರಣ ಮಳೆಯಾಗಿದೆ. ನಗರದ ಪ್ರಮುಖ ಬೀದಿಗಳಲ್ಲಿ ರಸ್ತೆ ಮೇಲೆ ನೀರು ಹರಿಯಿತು. ಸಿಂಧನೂರು, ಸಿರವಾರ, ಕವಿತಾಳ, ಲಿಂಗಸುಗೂರು, ಹಟ್ಟಿಚಿನ್ನದಗಣಿ, ದೇವದುರ್ಗ ತಾಲ್ಲೂಕಿನಲ್ಲೂ ಸಾಧಾರಣ ಮಳೆಯಾಗಿದೆ.
ಕೊಪ್ಪಳ ಜಿಲ್ಲೆಯಾದ್ಯಂತ ಭಾನುವಾರ ಮಳೆ ಸುರಿದಿದೆ.
ಹುಬ್ಬಳ್ಳಿ: ಧಾರವಾಡ, ಗದಗ, ಬೆಳಗಾವಿ, ಹೊಸಪೇಟೆ ಸೇರಿದಂತೆ ಹಲವೆಡೆ ಮಳೆಯಾಗಿದ್ದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗಾಳಿ ಮಳೆಯ ಅಬ್ಬರ ಮುಂದುವರಿದಿದ್ದು, ಮುರುಡೇಶ್ವರ, ಕಾರವಾರ, ಗೋಕರ್ಣ ಕಡಲತೀರಕ್ಕೆ ಜನರು ತೆರಳದಂತೆ ನಿರ್ಬಂಧಿಸಲಾಗಿದೆ.
ಕರಾವಳಿಯಲ್ಲಿ ಗಾಳಿಯ ಅಬ್ಬರದಿಂದಾಗಿ ಸಮುದ್ರದಲ್ಲಿ ರಭಸದ ಅಲೆಗಳು ಅಪ್ಪಳಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಕಡಲತೀರಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ.
ವಿಜಯನಗರ ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ 3,178 ಕ್ಯುಸೆಕ್‌ನಷ್ಟು ಒಳಹರಿವು ಇದೆ. ಸದ್ಯ ಜಲಾಶಯದಲ್ಲಿ 10.70 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ವಿಜಯಪುರ ಜಿಲ್ಲೆ ಆಲಮಟ್ಟಿ ಜಲಾಶಯಕ್ಕೆ ಭಾನುವಾರ ಒಂದೇ ದಿನ 34,939 ಕ್ಯುಸೆಕ್ ನೀರು ಹರಿದು ಬಂದಿದೆ.
ಶಿವಮೊಗ್ಗ: ಮಲೆನಾಡಿನಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಭಾನುವಾರ ಜಲಾಶಯದ 5 ಕ್ರಸ್ಟ್ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹರಿಸಲಾಯಿತು.
ಜೊತೆಗೆ, ಇಲ್ಲಿನ ಪವರ್ ಹೌಸ್ ಮೂಲಕ 5,000 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಒಟ್ಟು 7,500 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
3.24 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಇದ್ದು, ಭಾನುವಾರ ಬೆಳಿಗ್ಗೆ ವೇಳೆಗೆ ಭರ್ತಿಯಾಗಿದೆ. ಜಲಾಶಯಕ್ಕೆ 2,500 ಕ್ಯೂಸೆಕ್ ಒಳಹರಿವು ಇದ್ದು, ಮಳೆಯ ಪ್ರಮಾಣ ಹೆಚ್ಚಿದರೆ, ಜಲಾಶಯದ ಉಳಿದ ಕ್ರಸ್ಟ್ ಗೇಟ್‌ಗಳ ಮೂಲಕ ಇನ್ನೂ ಅಧಿಕ ಪ್ರಮಾಣದ ನೀರು ಹರಿಸಲಾಗುವುದು. ಜಲಾಶಯದ ತಗ್ಗು ಪ್ರದೇಶದ ಜನರು ಎಚ್ಚರದಿಂದ ಇರಬೇಕು ಎಂದು ತುಂಗಾ ಜಲಾಶಯದ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಪ್ಪಾನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡಿದೆ. 10,900 ಕ್ಯೂಸೆಕ್ ಒಳ ಹರಿವು ಇದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 0.35 ಅಡಿಗಳಷ್ಟು ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.