ADVERTISEMENT

ರಾಜ್ಯದ ವಿವಿಧೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 20:00 IST
Last Updated 8 ಏಪ್ರಿಲ್ 2019, 20:00 IST
ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ಸೋಮವಾರ ಗುಡುಗು ಸಹಿತ ಮಳೆ ಸುರಿಯಿತು 
ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ಸೋಮವಾರ ಗುಡುಗು ಸಹಿತ ಮಳೆ ಸುರಿಯಿತು    

ಬೆಂಗಳೂರು: ಬೆಂಗಳೂರು ನಗರ ಸೇರಿ ರಾಜ್ಯದ ಹಲವೆಡೆ ಗುಡುಗು–ಸಿಡಿಲು ಸಹಿತ ಸೋಮವಾರ ಉತ್ತಮ ಮಳೆ ಸುರಿದಿದೆ.

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯಿತು. ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಸಂಜೆ ಸುಮಾರು ಅರ್ಧ ಗಂಟೆ ಮಳೆಯಾಯಿತು.

ಸಾಧಾರಣ ಮಳೆ: ಹಾಸನ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಹಾಸನ ನಗರ, ಅರಸೀಕೆರೆ ಭಾಗದಲ್ಲಿ ತುಂತುರು ಮಳೆಯಾಗಿದೆ. ಬೇಲೂರು ಪಟ್ಟಣದಲ್ಲಿ ಅರ್ಧ ತಾಸು ಹಾಗೂ ಅರಕಲಗೂಡು, ರಾಮನಾಥಪುರದಲ್ಲಿ ಗುಡುಗು ಸಹಿತ ಕೆಲ ಹೊತ್ತು ಜೋರು ಮಳೆಯಾಗಿದೆ. ರಾಮನಾಥಪುರದಲ್ಲಿ ಸಿಡಿಲು ಬಡಿದು ಕುರಹಿನಶೆಟ್ಟಿ ಕಲ್ಯಾಣ ಮಂಟಪದ ಹಿಂಭಾಗದ ಎರಡು ತೆಂಗಿನ ಮರಗಳಿಗೆ ಹಾನಿಯಾಗಿದೆ.

ADVERTISEMENT

ಉತ್ತಮ ಮಳೆ: ಬಳ್ಳಾರಿ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ತೋರಣಗಲ್ಲು ಸಮೀಪದ ಮೆಟ್ರಿಕಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಎರಡು ಜಾನುವಾರುಗಳು ಸಿಡಿಲಿಗೆ ಬಲಿಯಾಗಿವೆ. ಬನವಾಸಿ ಸಮೀಪದ ಕುಪಗಡ್ಡೆ ಸುತ್ತಮುತ್ತ ಒಂದು ತಾಸು ಧಾರಾಕಾರ ಮಳೆಯಾಗಿದೆ. ಶಿರಸಿ ತಾಲ್ಲೂಕಿನ ಹೊಸಕೊಪ್ಪದಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಚಾವಣಿಗೆ ಹಾನಿಯಾಗಿದೆ. ಮುಂಡಗೋಡ ತಾಲ್ಲೂಕಿನಲ್ಲಿ ಮಳೆಯಾಗಿದ್ದು, ಪಾಳಾ ಗ್ರಾಮದಲ್ಲಿ ಜೆಡಿಎಸ್‌ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಪ್ರಚಾರ ಸಭೆಗಾಗಿ ಹಾಕಿದ್ದ ಶಾಮಿಯಾನ ಗಾಳಿ, ಮಳೆಗೆ ನೆಲಕ್ಕೆ ಉರುಳಿತು.

ಭಾರಿ ಗಾಳಿ, ಮಳೆ: ಮೂಡಿಗೆರೆ ತಾಲ್ಲೂಕಿನಾದ್ಯಂತ ಸೋಮವಾರ ಸುರಿದ ಗಾಳಿ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಪಟ್ಟಣ ಸೇರಿದಂತೆ ಹ್ಯಾಂಡ್ ಪೋಸ್ಟ್, ಬಿದರಹಳ್ಳಿ, ಹೊರಟ್ಟಿ, ಸಬ್ಬೇನಹಳ್ಳಿ, ಫಲ್ಗುಣಿ, ಚಕ್ಕಮಕ್ಕಿ, ಬಣಕಲ್, ಕೊಟ್ಟಿಗೆಹಾರ ಮುಂತಾದ ಪ್ರದೇಶಗಳಲ್ಲಿ ಒಂದೂವರೆ ಗಂಟೆಗೂ ಅಧಿಕ ಕಾಲ ರಭಸದ ಮಳೆ ಸುರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.

ತಾಲ್ಲೂಕು ಕಚೇರಿ ಆವರಣದಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆಯಾಗಿದ್ದ ಕೃಷಿ ಮಾರುಕಟ್ಟೆ ಸಮಿತಿಗೆ ಸೇರಿದ ಜೀಪಿನ ಮೇಲೆ ಹಲಸಿನ ಮರದ ಕೊಂಬೆ ಮುರಿದು ಬಿದ್ದಿದ್ದು, ಜೀಪಿನ ಹಿಂಭಾಗ ಜಖಂಗೊಂಡಿದೆ.

ತುಮಕೂರು ನಗರ, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ಮಳೆ ಸುರಿಯಿತು.

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯಾದ್ಯಂತ ಸೋಮವಾರ ಸಂಜೆ ಗಾಳಿ ಗುಡುಗು ಸಿಡಿಲು ಸಹಿತ ಸುಮಾರು 20 ನಿಮಿಷ ಮಳೆಯಾಯಿತು. ಸಿರಿಗೆರೆಯಲ್ಲೂ ಮಳೆ ಸುರಿಯಿತು. ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ.

ಸಿಡಿಲು ಬಡಿದು ಮೂವರ ಸಾವು
ಬೆಂಗಳೂರು: ರಾಜ್ಯದ ವಿವಿಧೆಡೆ ಸಿಡಿಲು ಬಡಿದು ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ.

ಬೆಂಗಳೂರಿನ ತಿಪ್ಪಗೊಂಡನಹಳ್ಳಿ ಬಳಿಯ ಜೋಗೇರಹಳ್ಳಿ ಗ್ರಾಮದಲ್ಲಿ ಯಶೋದಮ್ಮ (42) ಎಂಬುವರು ಸೋಮವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಸ್ಥಳೀಯ ನಿವಾಸಿ ಆಗಿದ್ದ ಯಶೋದಮ್ಮ ಕೂಲಿ ಕಾರ್ಮಿಕರಾಗಿದ್ದರು. ಪತಿ ಕೃಷ್ಣಪ್ಪ ಹಾಗೂ ಮಗನ ಜೊತೆ ವಾಸವಿದ್ದರು. ಅವರ ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಘಟನೆಯಲ್ಲಿ ಸಿದ್ದಗಂಗಮ್ಮ ಅವರಿಗೂ ಗಾಯವಾಗಿದ್ದು, ತಾವರೆಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮಾಗೋಡು ಗೊಲ್ಲರಹಟ್ಟಿ ಗ್ರಾಮದಲ್ಲಿ ರಾತ್ರಿ ಸಿಡಿಲು ಬಡಿದು ರಂಗನಾಥ್ (70) ಎಂಬುವವರು ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಸಮೀಪದ ಹೆಗ್ಗೆರೆ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಹಾಗೂ ರೈತ ಮಲ್ಲೇಶ್ (35) ಎಂಬುವವರು ಸಾವನ್ನಪ್ಪಿದ್ದಾರೆ. ಒಂದು ಮೇಕೆ ಸಹ ಮೃತಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.