ADVERTISEMENT

ಕೊಡಗಿನಲ್ಲಿ ಮಳೆ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 31 ಮೇ 2019, 19:45 IST
Last Updated 31 ಮೇ 2019, 19:45 IST
ಗೋಣಿಕೊಪ್ಪಲು ಸಮೀಪದ ದೇವರಪುರ ಗ್ರಾಮದಲ್ಲಿ ಮನೆಯೊಂದರ ಮೇಲೆ ಬಿದ್ದಿರುವ ಮರ
ಗೋಣಿಕೊಪ್ಪಲು ಸಮೀಪದ ದೇವರಪುರ ಗ್ರಾಮದಲ್ಲಿ ಮನೆಯೊಂದರ ಮೇಲೆ ಬಿದ್ದಿರುವ ಮರ   

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಗೋಣಿಕೊಪ್ಪಲು ಸಮೀಪದ ದೇವರಪುರ ಗ್ರಾಮದ ತಾರಿಕಟ್ಟೆ ಎಂಬಲ್ಲಿ ಮನೆಯ ಮೇಲೆ ಮರ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ರೆಹನತ್‌ (23) ಮೃತಪಟ್ಟ ಮಹಿಳೆ. ಅವರ ಪತಿ ನೌಶಾದ್‌ ಹಾಗೂ ಪುತ್ರ ನಸಲ್‌ (1) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿರುಗಾಳಿ ಹಾಗೂ ಜೋರು ಮಳೆಗೆ, ಮನೆಯ ಸಮೀಪವಿದ್ದ ಬೃಹತ್‌ ಮರ ಬಿದ್ದು ಈ ಅವಘಡ ಸಂಭವಿಸಿದೆ. ಮನೆಯೂ ಸಂಪೂರ್ಣ ಜಖಂಗೊಂಡಿದೆ.

ಮೈಸೂರಿನಲ್ಲೂ ಗುರುವಾರ ತಡರಾತ್ರಿ, ಸಿಡಿಲಿನ ಅಬ್ಬರದೊಂದಿಗೆ ಒಂದು ತಾಸು ಮಳೆಯಾಗಿದ್ದು, ಹಲವೆಡೆ ಮರಗಳು ಬಿದ್ದಿವೆ.

ADVERTISEMENT

ಸಿಡಿಲು ಬಡಿದು ವ್ಯಕ್ತಿ ಸಾವು: ಸಂಡೂರು ತಾಲ್ಲೂಕಿನ ಬಂಡ್ರಿ ಕೆರೆ ಏರಿಯ ಮೇಲೆ ಹುಚ್ಚೇನಹಳ್ಳಿ ಗ್ರಾಮದ ನಿವಾಸಿ ನೀರ್ಕಲ್ಲಪ್ಪ (48) ಶುಕ್ರವಾರ ರಾತ್ರಿ 8 ಗಂಟೆಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ದಕ್ಷಿಣ ಒಳನಾಡಿನಲ್ಲಿ ಎರಡು ದಿನ ಉತ್ತಮ ಮಳೆ ಸಾಧ್ಯತೆ
ಬೆಂಗಳೂರು: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಎರಡು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ, ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಹಾಸನ, ಕೊಡಗು, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಿದೆ.

ಮುಂಗಾರು ಪೂರ್ವ ಮಳೆ ಇದಾಗಿದ್ದು, ಜೂನ್ 7 ಅಥವಾ 8ರ ಸುಮಾರಿಗೆ ಮುಂಗಾರುರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಮಾನ್‌ಸೂನ್ ಮಾರುತಗಳುವಾಡಿಕೆಯಂತೆ ಮೇ 25ಕ್ಕೆ ಶ್ರೀಲಂಕಾ ಪ್ರವೇಶಿಸಬೇಕಿತ್ತು. ಆದರೆ, ಇನ್ನೂ ಅಂಡಮಾನ್ ಬಳಿ ಇವೆ. ಭಾರತ ಪ್ರವೇಶಿಸಲು ಒಂದು ವಾರ ಬೇಕಾಗಬಹುದು ಎಂದು ಇಲಾಖೆ ಮೂಲಗಳು ಹೇಳಿವೆ. ಮೊದಲಿಗೆ ಮುಂಗಾರು ದುರ್ಬಲ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗಿನ ಪರಿಸ್ಥಿತಿ ಗಮನಿಸಿದರೆ ದುರ್ಬಲ ಆಗುವುದಿಲ್ಲ, ಉತ್ತಮವಾಗಿಯೇ ಮಳೆ ಆಗಲಿದೆ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.