ADVERTISEMENT

ರಾಜ್ಯದ ವಿವಿಧೆಡೆ ಆಲಿಕಲ್ಲು ಸಹಿತ ವರುಣನ ಆರ್ಭಟ

ಚಾಮರಾಜನಗರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 20:09 IST
Last Updated 29 ಏಪ್ರಿಲ್ 2020, 20:09 IST
ಹನೂರು ತಾಲ್ಲೂಕಿನ ಒಡೆಯರಪಾಳ್ಯ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ ಮಳೆಗೆ ತುಂಬಿ ಹರಿಯುತ್ತಿರುವ ಉಡುತೊರೆಹಳ್ಳ
ಹನೂರು ತಾಲ್ಲೂಕಿನ ಒಡೆಯರಪಾಳ್ಯ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ ಮಳೆಗೆ ತುಂಬಿ ಹರಿಯುತ್ತಿರುವ ಉಡುತೊರೆಹಳ್ಳ   

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಧಾರಾಕಾರ ಮಳೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಹನೂರು ತಾಲ್ಲೂಕುಗಳಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದ್ದು, ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ ಎರಡು ಸೆಂ.ಮೀ ಮಳೆ ದಾಖಲಾಗಿದೆ. ಹನೂರು ತಾಲ್ಲೂಕಿನಲ್ಲಿ ಮೂರು ಸೆಂ.ಮೀ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 2.9 ಸೆಂ.ಮೀ, ಕೊಳ್ಳೇಗಾಲದಲ್ಲಿ ಎರಡು ಸೆಂ.ಮೀನಷ್ಟು ಮಳೆ ಬಿದ್ದಿದೆ. ಹನೂರು, ಗುಂಡ್ಲುಪೇಟೆ ತಾಲ್ಲೂಕುಗಳ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರರಿಂದ ಏಳು ಸೆಂ.ಮೀ ಮಳೆ ಬಿದ್ದಿದೆ.

ಮೈಸೂರು ಜಿಲ್ಲೆಯ ತಿ.ನರಸೀಪುರ, ನಂಜನಗೂಡು ಹಾಗೂ ಎಚ್.ಡಿ.ಕೋಟೆ ಉತ್ತಮ ಮಳೆಯಾಗಿದೆ. ತಿ.ನರಸೀಪುರ ತಾಲ್ಲೂಕಿನ ಸೀಹಳ್ಳಿಯಲ್ಲಿ 12 ಸೆಂ.ಮೀನಷ್ಟು ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ADVERTISEMENT

ಎಚ್.ಡಿ.ಕೋಟೆ ತಾಲ್ಲೂಕಿನ ಶಿರಮಳ್ಳಿ ಗ್ರಾಮದಲ್ಲಿ ಮನೆಯೊಂದರ ಚಾವಣಿ ಕುಸಿದು ಬಿದ್ದಿದೆ. ಮನೆಯೊಂದರ ಮೇಲೆ ಮರ ಬಿದ್ದಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

ಮಂಡ್ಯ ಸೇರಿದಂತೆ ಜಿಲ್ಲೆಯ ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ ಮತ್ತು ಕೆ.ಆರ್‌. ಪೇಟೆ ತಾಲ್ಲೂಕಿನ ಹಲವೆಡೆ ಬಿರುಸಿನ ಮಳೆಯಾಗಿದೆ.

ಸಂತಸ ತಂದ ಭರಣಿ: ತುಮಕೂರು ಜಿಲ್ಲೆಯಾದ್ಯಂತ ಉತ್ತಮವಾದ ಮಳೆ ಸುರಿದಿದೆ. ಕೊರಟಗೆರೆ, ತುಮಕೂರು, ಗುಬ್ಬಿ, ಮಧುಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಕೃಷಿ ಹೊಂಡಗಳು ತುಂಬಿವೆ. ತುಮಕೂರಿನ ಶೆಟ್ಟಿಹಳ್ಳಿ ಕೆಳಸೇತುವೆಯಲ್ಲಿ ನೀರು ತುಂಬಿದ್ದರಿಂದ ಆ ಮಾರ್ಗದಲ್ಲಿ ಸಂಚಾರ ಬಂದ್ ಆಗಿತ್ತು.

ಪಾವಗಡ ತಾಲ್ಲೂಕಿನ ನಾಗಲಮಡಿಕೆಯಲ್ಲಿ 8 ಸೆಂ.ಮೀ, ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 5 ಸೆಂ.ಮೀ ಮಳೆಯಾಗಿದೆ. ಮಧುಗಿರಿ ತಾಲ್ಲೂಕಿನ ಚೋಳೇನಹಳ್ಳಿಯ ಕೆರೆಗೆ ಹಳ್ಳದ ಮೂಲಕ ನೀರು ಹರಿಯುತ್ತಿದೆ. ಶಿರಾ ತಾಲ್ಲೂಕು ವ್ಯಾಪ್ತಿಯಲ್ಲಿ ಹದವಾದ ಮಳೆ ಸುರಿದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲ್ಲೂಕುಗಳಲ್ಲಿ ಕೆರೆ, ಕಟ್ಟೆ, ಕೃಷಿ ಹೊಂಡಗಳಿಗೆ ಅಲ್ಪ ಪ್ರಮಾಣದ ನೀರು ಬಂದಿದೆ.

ಧಾರವಾಡ ನಗರ, ವಿಜಯಪುರದ ಮುದ್ದೇಬಿಹಾಳ, ನಾಲತವಾಡ ಹಾಗೂ ಬೆಳಗಾವಿ ಜಿಲ್ಲೆ ರಾಯಭಾಗ, ಸವದತ್ತಿ, ಹಾರೂಗೇರಿ, ಬೈಲಹೊಂಗಲ, ಚಿಕ್ಕೋಡಿಯಲ್ಲಿ ಬುಧವಾರ ಸಂಜೆ ಗುಡುಗು,ಮಿಂಚಿನೊಂದಿಗೆ ಕೆಲ ಕಾಲ ಮಳೆಯಾಗಿದೆ.

ಚಿಕ್ಕೋಡಿ ತಾಲ್ಲೂಕಿನ ಪಟ್ಟಣಕುಡಿ ಗ್ರಾಮ ವ್ಯಾಪ್ತಿಯಲ್ಲಿ ಸಂಜೆ ಜೋರಾಗಿ ಬೀಸಿದ ಗಾಳಿ ಮತ್ತು ಮಳೆಗೆ ಕೋಳಿ ಸಾಕಾಣಿಕೆ ಘಟಕವೊಂದು ಛಾವಣಿ ಸಮೇತ ಸಂಪೂರ್ಣವಾಗಿ ಧರೆಗುರುಳಿ ಮೂರು ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದ್ದು, ಸುಮಾರು ₹ 50 ಸಾವಿರ ನಷ್ಟ ಉಂಟಾಗಿದೆ.

ಧಾರವಾಡ ನಗರದಲ್ಲಿ ಕೆಲ ಕಾಲ ಗುಡುಗು ಮಿಂಚಿನ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.