ADVERTISEMENT

ರೈತ ವಿದ್ಯಾನಿಧಿ ಯೋಜನೆ: ವಿದ್ಯಾರ್ಥಿಗಳ ಜತೆ‌ ಮುಖ್ಯಮಂತ್ರಿ‌ ಬೊಮ್ಮಾಯಿ ಸಂವಾದ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 11:47 IST
Last Updated 1 ಜೂನ್ 2022, 11:47 IST
   

ಮೂಡುಬಿದಿರೆ: ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ಜತೆ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಸಂವಾದ ನಡೆಸಿದರು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2021-22ನೇ ಸಾಲಿನಿಂದ ಇಲ್ಲಿಯವರೆಗೆ 28,966 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 21,823 ವಿದ್ಯಾರ್ಥಿಗಳಿಗೆ ಒಟ್ಟು ₹ 7.87 ಕೋಟಿ ಮೊತ್ತವನ್ನು ನೀಡಲಾಗಿದೆ. ಈ ಮೊತ್ತವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪಾವತಿಯಾಗಿದೆ.

ADVERTISEMENT

7,143 ವಿದ್ಯಾರ್ಥಿಗಳಿಗೆ ₹ 3.14 ಕೋಟಿ ಮೊತ್ತ ಶೀಘ್ರದಲ್ಲಿ ಪಾವತಿಯಾಗಲಿದೆ ಎಂದು ತಿಳಿಸಲಾಯಿತು.

ಇದೇ ವೇಳೆ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಡಿ ಮಂಗಳೂರು ಉರ್ವ ಮಾರ್ಕೆಟ್ ನಲ್ಲಿ ₹ 11.12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 33/11 ಕೆ.ವಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪ ಕೇಂದ್ರವನ್ನು ರಿಮೋಟ್ ಮೂಲಕ ಮುಖ್ಯಮಂತ್ರಿ ಉದ್ಘಾಟಿಸಿದರು.

ಈ ವಿದ್ಯುತ್ ಉಪ ಕೇಂದ್ರದಿಂದ ಮಣ್ಣಗುಡ್ಡೆ, ಗಾಂಧಿನಗರ, ಉರ್ವ ಮಾರ್ಕೆಟ್, ಬೊಳೂರು, ಬೊಕ್ಕಪಟ್ಣ, ಮಠದಕಣಿ, ತಿಲಕ್ ನಗರ, ಸುಲ್ತಾನ್ ಬತ್ತೇರಿ ಮೊದಲಾದ ಭಾಗಗಳ ಸುಮಾರು 35 ಸಾವಿರ ವಿದ್ಯುತ್ ಗ್ರಾಹಕರಿಗೆ ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು‌.‌ ಕಂದಾಯ ಸಚಿವ ಆರ್. ಅಶೋಕ್, ಸಚಿವರಾದ ಗೋವಿಂದ ಕಾರಜೋಳ, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಇದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ‌ನಿರ್ವಹಣಾಧಿಕಾರಿ ಡಾ. ಕುಮಾರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.