ರಾಜಕಾಲುವೆ
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಬೆಂಗಳೂರು: ರಾಜ್ಯದಲ್ಲಿ ಮಳೆನೀರು ಹರಿಸುವ ರಾಜಕಾಲುವೆಗಳ ಬಫರ್ ವಲಯವನ್ನು ಈಗಿರುವ ವ್ಯಾಪ್ತಿಗಿಂತ ಅರ್ಧದಷ್ಟು ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ.
ಮುಖ್ಯ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳ ಸಭೆಯ ತೀರ್ಮಾನದಂತೆ ನೀಡಲಾಗಿರುವ ವರದಿಗೆ ಸರ್ಕಾರ ಅನುಮೋದನೆ ನೀಡಿದೆ. ಬಫರ್ ವಲಯ ಕಡಿಮೆಗೊಳಿಸುವ ಕುರಿತು, ನಗರಾಭಿವೃದ್ಧಿ ಇಲಾಖೆ ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕೆರೆಗಳ ‘ಸಂರಕ್ಷಿತ ಪ್ರದೇಶ’ವನ್ನು ಕಡಿಮೆ ಮಾಡಲು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಕಾಯ್ದೆಗೆ ತಿದ್ದುಪಡಿ ತರಲು ಜುಲೈ 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ರಾಜಕಾಲುವೆ ಬಫರ್ ವಲಯಕೆಟಿಸಿಡಿಎ ವ್ಯಾಪ್ತಿಗೆ ಬರದಿರುವುದ ರಿಂದ, ಸಮಿತಿಯ ತೀರ್ಮಾನದಂತೆ ಅಧಿಸೂಚನೆ ಹೊರಡಿಸಲುನಿರ್ಧರಿಸಲಾಗಿದೆ.
ಕೆರೆಗಳು ಮತ್ತು ರಾಜಕಾಲುವೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ‘ಸಂರಕ್ಷಿತ ಪ್ರದೇಶ’ವನ್ನು ನಿಗದಿಪಡಿಸಲು ಹಾಗೂ ಬಫರ್ ವಲಯದಲ್ಲಿ ಸಾರ್ವಜನಿಕ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲು ಕೆಟಿಸಿಡಿಎ ಕಾಯ್ದೆ ತಿದ್ದುಪಡಿ ತರಲು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿಯವರ ಸೂಚನೆಯಂತೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಜುಲೈ 10ರಂದು ನಡೆದ ಸಮಿತಿ ಸಭೆಯಲ್ಲಿ, ಕೆರೆಗಳು ಹಾಗೂ ರಾಜಕಾಲುವೆಗಳ ಬಫರ್ ವಲಯ ವ್ಯಾಪ್ತಿಯನ್ನು ಮರು ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಅದರ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಪ್ರಥಮ, ದ್ವಿತೀಯ ಮತ್ತು ತೃತೀಯ ರಾಜಕಾಲುವೆಗಳನ್ನು ಈ ಹಿಂದೆ ಸೂಕ್ತವಾಗಿ ವ್ಯಾಖ್ಯಾನಿಸಿಲ್ಲ
ಎಂದು ಅಭಿಪ್ರಾಯಪಟ್ಟಿರುವ ಸಮಿತಿ, ರಾಜಕಾಲುವೆಗಳ ಬಫರ್ ವಲಯ ನಿಗದಿಪಡಿಸುವ ಮುನ್ನ,
ರಾಜಕಾಲುವೆಗಳನ್ನು ಹೊಸದಾಗಿ ವ್ಯಾಖ್ಯಾನಿಸಿದೆ.
ರಾಜಕಾಲುವೆಗಳ ಬಫರ್ ವಲಯ ನಿಗದಿಪಡಿಸುವುದು ಕೆಟಿಸಿಡಿಎ ಕಾಯ್ದೆ ವ್ಯಾಪ್ತಿಯಲ್ಲಿ ಇಲ್ಲದಿರುವುದ ರಿಂದ ನಗರಾಭಿವೃದ್ಧಿ ಇಲಾಖೆಯಿಂದ ಪ್ರತ್ಯೇಕ ಅಧಿಸೂಚನೆ ಹೊರಡಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಸಲಹೆಯನ್ನು ಸಭೆ ಒಪ್ಪಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಸುಪ್ರೀಂ ಕೋರ್ಟ್ ಆದೇಶಗಳ ಬಗ್ಗೆ ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿಯವರು ಅಡ್ವೊಕೇಟ್ ಜನರಲ್ ಅಭಿಪ್ರಾಯದಂತೆ ನೀಡಿದ ಸಲಹೆಗಳಂತೆ ಕೆರೆ ಹಾಗೂ ರಾಜಕಾಲುವೆಗಳ ಬಫರ್ ವಲಯದ ಸಭೆಯಲ್ಲಿ ನಿಗದಿಪಡಿಸಲಾಗಿದೆ.
ಕೆರೆಗಳ ಏಕರೂಪದ 30 ಮೀಟರ್ ‘ಸಂರಕ್ಷಿತ ಪ್ರದೇಶ’ವನ್ನು, ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಬದಲಿಸಲು, ಕೆಟಿಸಿಡಿಎ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಅನುಮೋದನೆ ನೀಡಿತ್ತು. ಬಫರ್ ವಲಯ ಅನ್ನು ಮತ್ತಷ್ಟು ಕಡಿಮೆ ಮಾಡಬೇಕೆಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು
ತಿಳಿಸಿರುವುದರಿಂದ, ಪ್ರಸ್ತಾವವನ್ನು ಮತ್ತೆ ಸಿದ್ಧಪಡಿಸಲಾಗುತ್ತಿದೆ ಎಂದು
ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘10 ಗುಂಟೆ ವಿಸ್ತೀರ್ಣದವರೆಗಿನ ಕೆರೆಗಳಿಗೆ ಬಫರ್ ವಲಯ ಇರುವುದಿಲ್ಲ’ ಎಂಬುದು ಹೊಸ ತಿದ್ದುಪಡಿಯಾಗಿದೆ.
ಪ್ರಾಥಮಿಕ ರಾಜಕಾಲುವೆ: ಕಂದಾಯ ಇಲಾಖೆಗಳಲ್ಲಿ ನೈಸರ್ಗಿಕ ಕಾಲುವೆ/ ನಾಲಾಗಳಾಗಿದ್ದು, ಕೆರೆಯಿಂದ ಕೆರೆಗೆ ಅಥವಾ ಕೆರೆಯಿಂದ ನದಿಗೆ ಮಳೆನೀರು ಹರಿಸುವ ಕಾಲುವೆಗಳು.
ದ್ವಿತೀಯ ರಾಜಕಾಲುವೆ: ಕಂದಾಯ ಇಲಾಖೆಗಳಲ್ಲಿ ನೈಸರ್ಗಿಕ ಕಾಲುವೆ/ ನಾಲಾಗಳಾಗಿದ್ದು, ಕೆರೆಗಳಿಗೆ ಅಥವಾ ಪ್ರಾಥಮಿಕ ರಾಜಕಾಲುವೆಗೆ ಮಳೆ ನೀರನ್ನು ಹರಿಸುವ ಕಾಲುವೆಗಳು.
ತೃತೀಯ ರಾಜಕಾಲುವೆ: ಕಂದಾಯ ಇಲಾಖೆಗಳಲ್ಲಿ ನೈಸರ್ಗಿಕ ಕಾಲುವೆ/ ನಾಲಾಗಳಾಗಿದ್ದು, ದ್ವಿತೀಯ ಹಂತದ ರಾಜಕಾಲುವೆಗೆ ಮಳೆ ನೀರು ಹರಿಸುವ ಕಾಲುವೆಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.