ADVERTISEMENT

ರಾಜಕೀಯ ಲಾಭಕ್ಕಾಗಿ ಡ್ಯಾಂ: ಮೇಕೆದಾಟು ಯೋಜನೆಗೆ ಜಲ ತಜ್ಞ ರಾಜೇಂದ್ರ ಸಿಂಗ್ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 1:14 IST
Last Updated 10 ಮಾರ್ಚ್ 2022, 1:14 IST
ರಾಜೇಂದ್ರ ಸಿಂಗ್
ರಾಜೇಂದ್ರ ಸಿಂಗ್   

ಬೆಂಗಳೂರು: ‘ಹೊಸ ಅಣೆಕಟ್ಟುಗಳನ್ನು ನಿರ್ಮಿಸುವುದರಿಂದ ರಾಜಕೀಯ ನಾಯಕರ ಜೇಬು ತುಂಬುತ್ತದೆಯೇ ಹೊರತು ಜನಸಾಮಾನ್ಯರಿಗೆ ಯಾವ ಪ್ರಯೋಜನವಿಲ್ಲ. ರಾಜಕೀಯ ಲಾಭಕ್ಕಾಗಿ ಡ್ಯಾಂ ಸಂಸ್ಕೃತಿ ಮುಂದುವರಿಸಿದ್ದಾರೆ’ ಎಂದುಜಲತಜ್ಞ ರಾಜೇಂದ್ರ ಸಿಂಗ್ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳುಕಾರ್ಪೊರೇಟ್ ಸಂಸ್ಥೆಗಳ ಪರ ನಿಂತಿದ್ದು, ಜನಸಾಮಾನ್ಯರ ಪರವಾಗಿ ಯೋಚನೆ ಮಾಡುತ್ತಿಲ್ಲ’ ಎಂದು ದೂರಿದರು.

‘ನದಿಗಳ ಅಕ್ಕಪಕ್ಕದ ಜಾಗವನ್ನು ರಿಯಲ್ ಎಸ್ಟೇಟ್ ಮಾಫಿಯಾ ನುಂಗಿದೆ. ಇದರಿಂದ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಹಾಳಾಗಿದೆ. ಈಗಿನ ಆಡಳಿತ ವ್ಯವಸ್ಥೆಯೇ ಇದಕ್ಕೆ ಕಾರಣ.ಇರುವ ನೀರಿನ ಮೂಲಗಳನ್ನು ವಿಕೇಂದ್ರೀಕರಿಸಿ, ಅವುಗಳನ್ನು ನಿರ್ವಹಣೆ ಮಾಡಿದರೆ ನೀರಿನ ಅಭಾವ ಕ್ರಮೇಣ ತಗ್ಗಲಿದೆ’ ಎಂದು ಸಲಹೆ ನೀಡಿದರು.

ADVERTISEMENT

ನಟ ಚೇತನ್‌, ‘ರಾಜಕಾರಣಿಗಳು ಮೇಕೆದಾಟು ವಿಚಾರವನ್ನು ‘ಕರ್ನಾಟಕ ವರ್ಸಸ್‌ ತಮಿಳುನಾಡು’ ಎಂದು ಬಿಂಬಿಸುತ್ತಿದ್ದಾರೆ. ಮೇಕೆದಾಟು ಯೋಜನೆಯಲ್ಲಿ ರಾಜ್ಯದ ಮೂರೂ ಪಕ್ಷಗಳು ಒಳಒಪ್ಪಂದ ಮಾಡಿಕೊಂಡಿವೆ. ಎಲ್ಲ ಪಕ್ಷಗಳು ಪರಿಸರ ನಾಶದ ಪರ ಇವೆ. ಇದನ್ನು ವಿರೋಧಿಸಬೇಕು’ ಎಂದರು.

‘ನಾನು ಮೇಕೆದಾಟು ಪರ. ಆದರೆ, ಅಣೆಕಟ್ಟು ನಿರ್ಮಾಣಕ್ಕೆ ವಿರೋಧವಿದೆ. ನೀರು ಭಾವನಾತ್ಮಕ ವಿಚಾರ. ರಾಜಕೀಯ ಪಕ್ಷಗಳು ಜನರ ಈ ಭಾವನೆಗಳ ಜೊತೆ ಆಟ ಆಡುತ್ತಿವೆ. ಯೋಜನೆಗಳ ಮುಖಾಂತರ ಭಾವನೆಗಳ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೇಕೆದಾಟು ಯೋಜನೆ ಪರಿಸರಕ್ಕೆ ಮಾರಕ. ಈ ಮೂಲಕ ಕರ್ನಾಟಕದ ನೆಲ–ಜಲ ಧ್ವಂಸ ಮಾಡಲು ರಾಜಕಾರಣಿಗಳು ಹೊರಟಿದ್ದಾರೆ.ಗುತ್ತಿಗೆದಾರರೇ ರಾಜಕಾರಣಿಗಳಾಗಿರುವುದು ದುರಂತ. ಅವರ ರಾಜಕೀಯ ಲಾಭಕ್ಕಾಗಿ ಮೇಕೆದಾಟು ಯೋಜನೆ ತರುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

‘ಮೇಕೆದಾಟು ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಪಕ್ಷಗಳೊಂದಿಗೆ ಸಭೆ ಕರೆದಿದ್ದಾರೆ. ಪರಿಸರವಾದಿಗಳು ಹಾಗೂ ಜಲತಜ್ಞರನ್ನೂ ಚರ್ಚೆಗೆ ಆಹ್ವಾನಿಸಬೇಕು’ ಎಂದು ಒತ್ತಾಯಿಸಿದರು.

ಲೇಖಕಿ ಬಿ.ಟಿ.ಲಲಿತಾ ನಾಯಕ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.