ADVERTISEMENT

ಕೋವಿಡ್‌–19 ಸಂಶೋಧನೆಗೆ 15 ಪ್ರಾಜೆಕ್ಟ್‌ ಅಂತಿಮ

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿಯ 22ನೇ ಘಟಿಕೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 1:01 IST
Last Updated 24 ಜೂನ್ 2020, 1:01 IST
ಡಾ.ಎಸ್‌. ಸಚ್ಚಿದಾನಂದ
ಡಾ.ಎಸ್‌. ಸಚ್ಚಿದಾನಂದ   

ಬೆಂಗಳೂರು: ಕೋವಿಡ್‌–19 ಕುರಿತ ಸಂಶೋಧನೆಗೆ ವೈದ್ಯ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸಿದ್ದು, ಈ ಕುರಿತು 15 ಪ್ರಾಜೆಕ್ಟ್‌ಗಳನ್ನು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಆಯ್ಕೆ ಮಾಡಿದೆ.

‘50 ಪ್ರಾಜೆಕ್ಟ್‌ಗಳು ಬಂದಿದ್ದವು. 15 ಪ್ರಾಜೆಕ್ಟ್‌ಗಳನ್ನು ಅಂತಿಮಗೊಳಿಸಿದ್ದೇವೆ. ಸುಮಾರು ₹2 ಕೋಟಿ ವೆಚ್ಚದಲ್ಲಿ ಸಂಶೋಧನೆ ನಡೆಯಲಿದೆ’ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಸಚ್ಚಿದಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಯೋಜನೆಯಡಿ, ಪರಿಸರ ಸ್ನೇಹಿ ಹಸಿರು ಪಿಪಿಇ ಕಿಟ್‌ ಸಿದ್ಧಪಡಿಸುವ ಒಂದು ವಿಶೇಷ ಪ್ರಾಜೆಕ್ಟ್‌ ಕೂಡ ಸೇರಿಕೊಂಡಿದೆ. ಕೊರೊನಾ ತಡೆ ಕುರಿತು ಸಲಹೆ ಸೂಚಿಸುವ ಐಡಿಯಾಥಾನ್‌ ಕೂಡ ಆಯೋಜಿಸಿದ್ದೆವು. ಒಟ್ಟು 200 ಹೊಸ ಉಪಾಯಗಳು ಬಂದಿದ್ದು, ಅವುಗಳಲ್ಲಿ 28 ಸಲಹೆಗಳನ್ನು ಅಂತಿಮಗೊಳಿಸಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

‘ಕೊರೊನಾ ಸೋಂಕು ತಡೆ ಸಂಬಂಧ 100 ಕಾರ್ಯಕ್ರಮಗಳನ್ನು ಮಾಡಿದ್ದೇವೆ. 2 ಲಕ್ಷ ಕೊರೊನಾ ಹೋರಾಟಗಾರರಿಗೆ ತರಬೇತಿ ನೀಡಲಾಗಿದೆ.ಜಿಲ್ಲಾವಾರು ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸಿದ್ದೇವೆ’ ಎಂದು ತಿಳಿಸಿದರು.

ಘಟಿಕೋತ್ಸವ 25ರಂದು:‘ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವವು ಜೂನ್‌ 25ರಂದು ನಡೆಯಲಿದೆ. ಪಿಎಚ್‌ಡಿ ಮತ್ತು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಮಾತ್ರ ನೇರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಉಳಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆನ್‌ಲೈನ್‌ನಲ್ಲಿಯೇ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ಸಚ್ಚಿದಾನಂದ ಹೇಳಿದರು.

‘ಕೊರೊನಾ ವಿರುದ್ಧದ ಸುರಕ್ಷತಾ ಕ್ರಮಗಳೊಂದಿಗೆ ಗರಿಷ್ಠ 200 ಜನ ಮೀರದಂತೆ ಕಾರ್ಯಕ್ರಮ ನಡೆಯಲಿದೆ’ ಎಂದು ಅವರು ತಿಳಿಸಿದರು.

36,434 ವಿದ್ಯಾರ್ಥಿಗಳಿಗೆ ಪದವಿ:‘ಈ ವರ್ಷ ಶೇ 82.3ರಷ್ಟು ಫಲಿತಾಂಶ ಬಂದಿದೆ. ಇದು ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಒಟ್ಟು 36,434 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಧಾರವಾಡದ ಎಸ್‌ಡಿಎಂ ದಂತವೈದ್ಯಕೀಯ ಕಾಲೇಜಿನ ಆರ್. ರಶ್ಮಿಕಾ 6 ಚಿನ್ನದ ಪದಕಗಳು ಮತ್ತು ಬೆಂಗಳೂರಿನ ಶ್ರೀ ಶ್ರೀ ಆಯುರ್ವೇದ ವಿಜ್ಞಾನ ಮತ್ತು ಸಂಶೋಧನಾ ಕಾಲೇಜಿನ ಡಾ. ಬಿ.ಎಸ್. ಚಿಂದು ಐದು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ’ ಎಂದು ಅವರು ತಿಳಿಸಿದರು.

30ರ ನಂತರ ನಿರ್ಧಾರ:‘ವೈದ್ಯಕೀಯ ಪರೀಕ್ಷೆ ಕುರಿತು ರಾಜ್ಯ ಸರ್ಕಾರವು ಜೂನ್‌ 30ರಂದು ನಿರ್ಧಾರ ತೆಗೆದುಕೊಳ್ಳಲಿದೆ. ತರುವಾಯ ವಿಶ್ವವಿದ್ಯಾಲಯವು ಪರೀಕ್ಷೆ ಕುರಿತು ತೀರ್ಮಾನ ಕೈಗೊಳ್ಳಲಿದೆ’ ಎಂದು ಕುಲಪತಿ ಹೇಳಿದರು.

ಕುಲಸಚಿವ (ಮೌಲ್ಯಮಾಪನ) ಡಾ. ಲಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.