ADVERTISEMENT

ದೇಶಕ್ಕೆ ಅಸ್ಥಿರ ಸರ್ಕಾರ ಬೇಕಿಲ್ಲ: ಕಾಂಗ್ರೆಸ್ ವಿರುದ್ಧ ರಾಜನಾಥ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 10:43 IST
Last Updated 9 ಮಾರ್ಚ್ 2019, 10:43 IST
   

ಮಂಗಳೂರು: ದೇಶವಿರಲಿ, ರಾಜ್ಯವಿರಲಿ ಮಜಬೂರ (ಅಸ್ಥಿರ) ಸರ್ಕಾರ ಬೇಕಿಲ್ಲ, ಮಜಬೂತ (ಸ್ಥಿರ) ಸರ್ಕಾರ ಬೇಕು ಎಂದು‌‌ ಕೇಂದ್ರ ಗೃಹ ಸಚಿವ‌ ರಾಜನಾಥ್‌ಸಿಂಗ್ ಹೇಳಿದರು.

ರಾಜ್ಯದಲ್ಲಿ ಅವಕಾಶವಾದಿ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಇದರಿಂದ ಜನರಿಗೆ ಯಾವುದೇ ಪ್ರಯೋಜನ ಆಗದು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಡುತ್ತಿವೆ. ಈ ಸರ್ಕಾರ ಯಾವಾಗ ಬೀಳುತ್ತದೆಯೋ ಗೊತ್ತಿಲ್ಲ ಎಂದರು.

ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಮೈತ್ರಿ ಸರ್ಕಾರ ಇದುವರೆಗೆ ಅದನ್ನೂ ಮಾಡಿಲ್ಲ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ರೈತರ ಮಾಹಿತಿಯನ್ನೂ ರಾಜ್ಯ ಸರ್ಕಾರ ಇದುವರೆಗೆ ನೀಡಿಲ್ಲ. ಕೂಡಲೇ ರೈತ ಫಲಾನುಭವಿಗಳ‌ ಪಟ್ಟಿಯನ್ನು‌ ರಾಜ್ಯ ಸರ್ಕಾರ ಕಳುಹಿಸಬೇಕು ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಇದುವರೆಗೆ ಕೇವಲ ಭರವಸೆಗಳನ್ನು ನೀಡುತ್ತ ಬಂದಿದೆಯೇ ಹೊರತು, ಅವುಗಳನ್ನು ಕಾರ್ಯರೂಪಕ್ಕೆ ತಂದಿಲ್ಲ. ಭರವಸೆ ನೀಡುವುದು, ಅದನ್ನು ಮರೆಯುವುದು ಕಾಂಗ್ರೆಸ್‌ ಗುಣ ಎಂದು ಲೇವಡಿ ಮಾಡಿದರು.

ಬಡತನ, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳುತ್ತಲೇ ಬಂದಿದ್ದಾರೆ. ಆದರೆ, ಇದುವರೆಗೆ ಏನನ್ನು ಮಾಡಿಲ್ಲ. ಸ್ವತಃ ರಾಜೀವ ಗಾಂಧಿಯವರೇ ಕೇಂದ್ರದಿಂದ ₹1 ನೀಡಿದರೆ, ಫಲಾನುಭವಿಗೆ 15 ಪೈಸೆ ಮಾತ್ರ ಸಿಗುತ್ತದೆ ಎಂದು ಹೇಳಿದ್ದರು. ಕಾಂಗ್ರೆಸ್‌ನ ಆಡಳಿತಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಾಗಿಲ್ಲ ಎಂದರು.

ಭ್ರಷ್ಟಾಚಾರವನ್ನು ತೊಡೆದು ಹಾಕಲು ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ‌ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದರಿಂದ ಕಳ್ಳರ ಪಾಲಾಗುತ್ತಿದ್ದ ₹1.10 ಲಕ್ಷ ಕೋಟಿ ಉಳಿತಾಯ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.