ವಿಜಯಪುರ: ಹೃದಯಾಘಾತದಿಂದ ನಿಧನರಾದ ಧಾರವಾಡ ರಂಗಾಯಣ ನಿರ್ದೇಶಕ, ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿಯಲ್ಲಿನ ರಂಗಾಶ್ರಯ ಸಭಾಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ.
ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರಕ್ಕೆ ಸಚಿವ ಶಿವಾನಂದ ಪಾಟೀಲ ಸೇರಿದಂತೆ ನೂರಾರು ಅಭಿಮಾನಿಗಳು, ಸ್ನೇಹಿತರು, ಕುಟುಂಬ ವರ್ಗದವರು ಅಂತಿಮ ಗೌರವ ಸಲ್ಲಿಸಿದರು.
ಸಿಂದಗಿ ಕನ್ನಡ ಸಾಹಿತ್ಯ ಗೆಳೆಯರ ಬಳಗ ಆಯೋಜನೆ ಮಾಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಂಗಭೂಮಿಯ ಅಪ್ರತಿಮ ಕಲಾವಿದ ರಾಜು ತಾಳಿಕೋಟೆಯವರ ನಿಧನ ಸುದ್ದಿ ಕೇಳಿ ಸಿಡಿಲು ಬಡಿದಂತಾಗಿದೆ. ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಮಠದಲ್ಲಿ ಇದ್ದು, ಸಮಾಜಮುಖಿಯಾಗಿ ಬೆಳೆದು ಬಂದವರು. ಎಲ್ಲರನ್ನೂ ನಗಿಸಿ,ನಗು ನಗುತ್ತಾ ನಮ್ಮಿಂದ ದೂರಾಗಿದ್ದಾರೆ ಎಂದರು.
ರಾಜು ತಾಳಿಕೋಟೆ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.
ಬೆಂಗಳೂರು ರಂಗ ಸಮಾಜದ ಶ್ರೀಧರ ಹೆಗಡೆ ಮಾತನಾಡಿ, ರಾಜು ತಾಳಿಕೋಟಿಯವರು ಚಿಕ್ಕಸಿಂದಗಿಯಲ್ಲಿ ನಿರ್ಮಿಸಿರುವ ರಂಗಾಶ್ರಯ ವನ್ನು ಸರ್ಕಾರ ಸ್ಮಾರಕವನ್ನಾಗಿಸಬೇಕು ಎಂದು ಕೇಳಿಕೊಂಡರು.
ಮಾಜಿ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ರಂಗಭೂಮಿ ಕಲಾವಿದರಾದ ಪ್ರೇಮಾ ಗುಳೇದಗುಡ್ಡ, ಸಿದ್ದು ನಾಲತವಾಡ ಮುಂತಾದವರು ತಾಳಿಕೋಟೆ ಅವರ ಅಂತಿಮ ದರ್ಶನ ಪಡೆದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ , ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸೀಂಪೀರ ವಾಲೀಕಾರ, ಕನ್ನಡ ಸಾಹಿತ್ಯ ಗೆಳೆಯರ ಬಳಗದ ರಾಜಶೇಖರ ಕೂಚಬಾಳ, ಸಿದ್ದಲಿಂಗ ಚೌಧರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.