ADVERTISEMENT

ಬಾಗಲಕೋಟೆ: ಜಾನಪದ ಗಾರುಡಿಗನಿಗೆ ವಿಶೇಷ ಗೌರವ

ಗಾಯಕ, ನಟ ಗುರುರಾಜ ಹೊಸಕೋಟಿಗೆ ರಾಜ್ಯೋತ್ಸವ ಪ್ರಶಸ್ತಿ

ವೆಂಕಟೇಶ ಜಿ.ಎಚ್.
Published 28 ಅಕ್ಟೋಬರ್ 2020, 12:14 IST
Last Updated 28 ಅಕ್ಟೋಬರ್ 2020, 12:14 IST
ಗುರುರಾಜ ಹೊಸಕೋಟಿ
ಗುರುರಾಜ ಹೊಸಕೋಟಿ   

ಬಾಗಲಕೋಟೆ: ‘ಕಲಿತ್ತ ಹುಡುಗಿ ಕುದರೆ ನಡಗಿ, ಕಡ್ಲಿಮಟ್ಟಿ ಕಾಶಿಬಾಯಿ, ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದವ್ವ’ ಮೊದಲಾದ ಜಾನಪದ ಹಾಡುಗಳ ಮೂಲಕ ನಾಡಿನಾದ್ಯಂತ ಮನೆ ಮಾತಾಗಿರುವ ಮುಧೋಳ ತಾಲ್ಲೂಕು ಮಹಾಲಿಂಗಪುರದ ಗಾಯಕ, ನಟ ಗುರುರಾಜ ಹೊಸಕೋಟಿ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವ ಸಂದಿದೆ.

ಮಹಾಲಿಂಗಪುರದ ಕೀರ್ತನಕಾರ ರುದ್ರಪ್ಪ ಹೊಸಕೋಟಿ ಹಾಗೂ ಗೌರವ್ವ ದಂಪತಿಯ 9 ಮಕ್ಕಳಲ್ಲಿ ಗುರುರಾಜ ಎಂಟನೆಯವರು. ಮಹಾಲಿಂಗಪುರದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಮುಧೋಳದಲ್ಲಿ ಪಿಯುಸಿ ಕಲಿತ ಗುರುರಾಜ ಹೊಸಕೋಟಿ ಅವರಿಗೆ ಹಾಡುಗಾರಿಕೆ ಅಪ್ಪನಿಂದ ಬಂದ ಬಳುವಳಿ.

ಪಿಯುಸಿ ಮುಗಿದ ನಂತರ ಮಹಾಲಿಂಗಪುರ ಬಳಿಯ ಸಮೀರವಾಡಿಯ ಸೋಮಯಾ ಶುಗರ್ಸ್‌ನಲ್ಲಿ 10 ವರ್ಷ ಕಾಲ ಕೆಲಸ ಮಾಡಿದ ಅವರು, 1983ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೆಂಗಳೂರಿಗೆ ತೆರಳಿದರು.

ADVERTISEMENT

‘ಸಮೀರವಾಡಿಯಲ್ಲಿ ಇದ್ದಾಗಲೇ ಹಾಡುಗಾರಿಕೆ ಆರಂಭಿಸಿದೆನು. ಕಲಾವಿದರ ಕೋಟಾದಲ್ಲಿಯೇ ಕಾರ್ಖಾನೆಯವರು ಕೆಲಸ ಕೊಟ್ಟಿದ್ದರು. ಅಲ್ಲಿ ಮೊದಲಿಗೆ ಸೆಂಟ್ರಿ ಫ್ಯುಯಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಗಂಧಕದ ವಾಸನೆ ಪರಿಣಾಮ ಧ್ವನಿಪೆಟ್ಟಿಗೆಗೆ ತೊಂದರೆ ಆಗುತ್ತಿತ್ತು. ಅದನ್ನು ಮನಗಂಡ ಆಗಿನ ಮುಖ್ಯ ವ್ಯವಸ್ಥಾಪಕ ಮಂಗಲ್‌ಸಿಂಗ್ ನನ್ನ ಬೇರೆ ವಿಭಾಗಕ್ಕೆ ವರ್ಗಾಯಿಸಿದರು. ನಾನು ಕಾರ್ಯಕ್ರಮ ಕೊಡಲು ಹೋದಾಗ ರಜೆ ಕೊಡುತ್ತಿದ್ದರು. ಅವರು ನೀಡಿದ ಬೆಂಬಲ ಮರೆಯಲು ಸಾಧ್ಯವೇ ಇಲ್ಲ’ ಎಂದು ಹೊಸಕೋಟಿ ಸ್ಮರಿಸಿಕೊಳ್ಳುತ್ತಾರೆ.

‘ಬಳಿಕ ಲಹರಿ ಸಂಸ್ಥೆಯ ವೇಲು ನನ್ನನ್ನು ಗುರುತಿಸಿ ಅವರ ಸಂಸ್ಥೆಗೆ ಹಾಡಿಸಿದರು. ಇದು ಬೆಂಗಳೂರಿನಲ್ಲಿ ನನ್ನನ್ನು ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಬೆಳೆಯಲು ಅವಕಾಶ ಕಲ್ಪಿಸಿತು’ ಎನ್ನುತ್ತಾರೆ ಗುರುರಾಜ ಹೊಸಕೋಟಿ.

ಈವರೆಗೆ 603 ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿದ್ದಾರೆ. 4,500 ಗೀತೆಗಳನ್ನು ರಚಿಸಿದ್ದಾರೆ. ಸಿನಿಮಾ ರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿರುವ ಅವರು 121 ಸಿನಿಮಾಗಳಲ್ಲಿ ಪಾತ್ರ ಅಭಿನಯಿಸಿದ್ದು, 85 ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ.

ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಗುರುರಾಜ ಹೊಸಕೋಟಿ ಕಳೆದ 38 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.