ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳು ಅನುಭವಿಸಿದ್ದ ನಷ್ಟ ₹5,900 ಕೋಟಿ ಹಾಗೂ ಭವಿಷ್ಯ ನಿಧಿ, ಸಾಮಗ್ರಿಗಳ ಖರೀದಿ, ಡೀಸೆಲ್ ಬಾಕಿಯನ್ನು ಕಾಂಗ್ರೆಸ್ ಸರ್ಕಾರ ತೀರಿಸುತ್ತಲೇ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಕುರಿತ ಹೇಳಿಕೆಯನ್ನು‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, 2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ 2018ರಲ್ಲಿ ನಿರ್ಗಮಿಸುವಾಗ ಸಾರಿಗೆ ನಿಗಮಗಳಲ್ಲಿ ಭವಿಷ್ಯ ನಿಧಿ ಮೊತ್ತ ಬಾಕಿ ಇದ್ದದ್ದು ₹13.71 ಕೋಟಿ. ಆದರೆ, 2023ರ ಮೇ ಅಂತ್ಯಕ್ಕೆ ಬಿಜೆಪಿ ಸರ್ಕಾರ ಬಿಟ್ಟುಹೋದ ಭವಿಷ್ಯ ನಿಧಿ ಬಾಕಿ ₹1,380.59 ಕೋಟಿ ಎಂದಿದ್ದಾರೆ.
ಸಾರಿಗೆ ಸಿಬ್ಬಂದಿಗೆ 2020 ಜನವರಿಯಲ್ಲಿ ಹೆಚ್ಚಳ ಮಾಡಬೇಕಿದ್ದ ವೇತನವನ್ನು 38 ತಿಂಗಳು ತಡವಾಗಿ ನೀಡಲಾಗಿತ್ತು. ಹಿಂಬಾಕಿ ಹಣವನ್ನೂ ನೀಡಲಿಲ್ಲ. ಸಾರಿಗೆ ಸಿಬ್ಬಂದಿಗೆ ಮೋಸ ಮಾಡಿದ ಬಿಜೆಪಿ ನಾಯಕರಿಗೆ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಶಕ್ತಿ ಯೋಜನೆ ಜತೆಗೆ ಬಿಜೆಪಿ ಸರ್ಕಾರ ಬಿಟ್ಟುಹೋದ ಸಾಲವನ್ನೂ ತೀರಿಸುತ್ತಾ ಸಾರಿಗೆ ಸಂಸ್ಥೆಗಳಿಗೆ ಬಲತುಂಬಲಾಗಿದೆ. ದೇಶದಲ್ಲಿಯೇ ಅತ್ಯುತ್ತಮ ಎಂಬ ಹೆಗ್ಗಳಿಕೆ ಪಡೆದಿವೆ. ಬಾಕಿ ಉಳಿಸಿಕೊಂಡು ಸಿಬ್ಬಂದಿಗೆ ಮೋಸ ಮಾಡಿಲ್ಲ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.