ಬೆಂಗಳೂರು: ‘ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ವಿಚಾರಗಳ ಬಗ್ಗೆ ನಮ್ಮವರೇ ಹೇಳಿಕೆ ನೀಡುತ್ತಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಇಂತಹ ಹೇಳಿಕೆಗಳನ್ನು ನೀಡದಂತೆ ನಮ್ಮ ಬಾಯಿಗೆ ನಾವೇ ಬ್ರೇಕ್ ಹಾಕಿಕೊಳ್ಳಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿ, ಅಧಿಕಾರ ಹಂಚಿಕೆ, ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ, ಸಂಪುಟ ಪುನರ್‌ರಚನೆ ಹೀಗೆ ಹಲವು ವಿಚಾರಗಳ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ ಇರಲಿಲ್ಲ. ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಪಾಲಿಸಬೇಕು’ ಎಂದರು.
‘ಆರ್.ವಿ. ದೇಶಪಾಂಡೆ, ಬಸವರಾಜ ರಾಯರಡ್ಡಿ, ಬಿ.ಆರ್. ಪಾಟೀಲ ಸೇರಿದಂತೆ ಇತರೆ ಹಿರಿಯರು ಕೂಡ ಸರ್ಕಾರದ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಮಾತನಾಡಿರುವುದರಿಂದಲೂ ಪಕ್ಷಕ್ಕೆ ಹಾನಿಯಾಗುತ್ತಿದೆ’ ಎಂದು ಹೇಳಿದರು.
‘ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಹಲವು ಬಾರಿ ಸೂಚಿಸಿದ್ದರೂ ನಿಂತಿಲ್ಲ. ನಾವೆಲ್ಲರೂ ಚಿಕ್ಕವರೇನಲ್ಲ. ಎರಡು ಬಾರಿ, ನಾಲ್ಕೈದು ಬಾರಿ, ಆರೇಳು ಬಾರಿ ಗೆದ್ದವರು ಇದ್ದಾರೆ. ಸಚಿವರಾಗಿ ಕಾರ್ಯನಿರ್ವಹಿಸಿದವರೂ ಇದ್ದು, 30-40 ವರ್ಷ ಪಕ್ಷದಲ್ಲಿ ದುಡಿದವರಿದ್ದಾರೆ. ಹೀಗಿದ್ದರೂ ಬಹಿರಂಗ ಹೇಳಿಕೆ ನೀಡುವುದು ಸೂಕ್ತವಲ್ಲ. ಬಹಿರಂಗ ಹೇಳಿಕೆಗಳ ಮೂಲಕ ನಾವೇ ಪ್ರತಿಪಕ್ಷಗಳ ಟೀಕೆಗೆ ಆಹಾರವಾಗುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.