ADVERTISEMENT

ಗಾರ್ಮೆಂಟ್ಸ್‌ಗೆ ಬೀಗ; ಕಾರ್ಮಿಕರು ಕಂಗಾಲು

ಬಾಂಬೆ ರೆಯಾನ್‌ ಫ್ಯಾಷನ್‌ ಲಿಮಿಟೆಡ್‌ ಕಂಪನಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 19:04 IST
Last Updated 16 ಸೆಪ್ಟೆಂಬರ್ 2019, 19:04 IST
ಬಾಂಬೆ ರೆಯಾನ್‌ ಫ್ಯಾಷನ್‌ ಲಿಮಿಟೆಡ್‌ ಕಂಪನಿ ಕಚೇರಿಯ ಎದುರು ಸೋಮವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು
ಬಾಂಬೆ ರೆಯಾನ್‌ ಫ್ಯಾಷನ್‌ ಲಿಮಿಟೆಡ್‌ ಕಂಪನಿ ಕಚೇರಿಯ ಎದುರು ಸೋಮವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು   

ರಾಮನಗರ: ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವ ‘ಬಾಂಬೆ ರೆಯಾನ್‌ ಫ್ಯಾಷನ್‌ ಲಿಮಿಟೆಡ್‌’ನ ಸಿದ್ಧ ಉಡುಪು ಕಾರ್ಖಾನೆಯು ಭಾನುವಾರ ಬಂದ್‌ ಆಗಿದ್ದು, ನೂರಾರು ಕಾರ್ಮಿಕರು ಬೀದಿಪಾಲಾಗಿದ್ದಾರೆ.

ಕಾರ್ಖಾನೆಯಲ್ಲಿ ಸದ್ಯ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಆಡಳಿತ ವಿಭಾಗದ ಸಿಬ್ಬಂದಿ ಅಲ್ಲಿಂದ ತೆರಳಿದ್ದಾರೆ. ಈ ಕುರಿತು ಸಾಕಷ್ಟು ಕಾರ್ಮಿಕರಿಗೆ ಮಾಹಿತಿ ನೀಡಿಲ್ಲ. ಇದರಿಂದ ಆತಂಕಗೊಂಡ ಕಾರ್ಮಿಕರು ಸೋಮವಾರ ಕಾರ್ಖಾನೆಯ ಎದುರು ಪ್ರತಿಭಟನೆ ನಡೆಸಿದರು.

ಆರ್ಥಿಕ ಹಿಂಜರಿತದ ಕಾರಣ ನೀಡಿ ಕಂಪನಿಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಲು ಕಾರ್ಖಾನೆಯು ಕೆಲವು ತಿಂಗಳ ಹಿಂದೆಯೇ ತೀರ್ಮಾನ ಕೈಗೊಂಡಿತ್ತು ಎನ್ನಲಾಗಿದೆ. ಕಾರ್ಖಾನೆಯಲ್ಲಿ 800ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ.

ADVERTISEMENT

ಈ ಪೈಕಿ ಕೆಲವರಿಗೆ ಮಾಹಿತಿ ನೀಡಿ ಹಣದ ಸೆಟ್ಲ್‌ಮೆಂಟ್‌ ಮಾಡಿತ್ತು. ಆದರೆ 200ಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲವು ತಿಂಗಳುಗಳಿಂದ ವೇತನ, ಭವಿಷ್ಯ ನಿಧಿ (ಪಿ.ಎಫ್‌), ಗ್ರಾಚ್ಯುಯಿಟಿ ಸೇರಿದಂತೆ ಯಾವುದೇ ಸೌಲಭ್ಯವನ್ನೂ ನೀಡಿರಲಿಲ್ಲ.

‘ಕೆಲಸಕ್ಕೆ ರಾಜೀನಾಮೆ ನೀಡುವಂತೆ ಕಂಪನಿಯ ಅಧಿಕಾರಿಗಳು ಒತ್ತಡ ಹೇರುತ್ತಲೇ ಇದ್ದರು. ಆದರೆ, 2–3 ತಿಂಗಳ ವೇತನ ಉಳಿಸಿಕೊಂಡಿದ್ದರು. ಪಿಎಫ್‌ ಹಣದ ಬಗ್ಗೆಯೂ ಮಾಹಿತಿ ಕೊಟ್ಟಿರಲಿಲ್ಲ. ಈಗ ಏಕಾಏಕಿ ಕಾರ್ಖಾನೆ ಬಂದ್ ಮಾಡಿ ತೆರಳಿದ್ದಾರೆ’ ಎಂದು ಕಾರ್ಖಾನೆಯ ಉದ್ಯೋಗಿ ಯೋಗೇಶ್‌ ದೂರಿದರು.

‘ಏಳು ವರ್ಷಗಳಿಂದ ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ. ಅವರು ಕೆಲಸದಿಂದ ತೆಗೆಯುವುದಾಗಿ ಹೇಳಿದ್ದರಿಂದ ಈಚೆಗೆ ಬೇರೆ ಕಡೆ ಕೆಲಸಕ್ಕೆ ಹೋಗಿದ್ದೆ. ಆದರೆ, ನನಗೆ 2–3 ತಿಂಗಳ ವೇತನದ ಜೊತೆಗೆ ಸೆಟ್ಲ್‌ಮೆಂಟ್‌ ಹಣ ಕೊಡಬೇಕಿತ್ತು. ಯಾವುದನ್ನೂ ಕೊಡದೇ ಏಕಾಏಕಿ ಖಾಲಿ ಮಾಡಿದ್ದಾರೆ’ ಎಂದು ಅರವಿಂದಮ್ಮ ಎಂಬುವರು ಆರೋಪಿಸಿದರು.

ಮುತ್ತಿಗೆ: ನೊಂದ ಕಾರ್ಮಿಕರು ಸೋಮವಾರ ಸಂಜೆ ರಾಮನಗರದಲ್ಲಿ ಇರುವ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದರು. ಕಾರ್ಖಾನೆಯು ಏಕಾಏಕಿ ಬಂದ್‌ ಆದ ಕಾರಣ ಬದುಕು ಬೀದಿಪಾಲಾಗಿದೆ. ಕಂಪನಿಯಿಂದ ಬರಬೇಕಾದ ವೇತನ ಬಾಕಿ ಕೊಡಲು ಸೂಚಿಸಬೇಕು ಎಂದು ಒತ್ತಾಯಿಸಿದರು.

ಮಾಹಿತಿ ನೀಡಿಲ್ಲ

‘ಕೈಗಾರಿಕಾ ವಿವಾದ ಕಾಯ್ದೆ–1989ರ ಅಡಿ ಯಾವುದೇ ಕಾರ್ಖಾನೆಯು ಉತ್ಪಾದನೆ ಸ್ಥಗಿತಗೊಳಿಸುವ ಇಲ್ಲವೇ ಸ್ಥಳಾಂತರಗೊಳ್ಳುವ ಮುನ್ನ ಕಾರ್ಮಿಕ ಇಲಾಖೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಆದರೆ ಬಾಂಬೆ ರೆಯಾನ್‌ ಕಂಪನಿಯ ಪ್ರತಿನಿಧಿಗಳು ನಮಗೆ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶೇಖರ್ ಗಡಾದ್‌ ತಿಳಿಸಿದರು. ಕಾರ್ಮಿಕರ ದೂರು ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

**

ಕಂಪನಿಯು ನೂರಾರು ಕಾರ್ಮಿಕರಿಗೆ 2–3 ತಿಂಗಳ ವೇತನ ನೀಡಿಲ್ಲ. ಕೆಲವರಿಗಷ್ಟೇ ಸೆಟ್ಲ್‌ಮೆಂಟ್‌ ಮಾಡಿ ಬಾಗಿಲು ಮುಚ್ಚಿದೆ
- ಯೋಗೇಶ್‌, ಗಾರ್ಮೆಂಟ್ಸ್‌ ಕಾರ್ಮಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.