ADVERTISEMENT

ಪುಸ್ತಕದಲ್ಲಿ ಹಾಜರಿ: ಕರ್ತವ್ಯಕ್ಕೆ ಗೈರು! ಇದು ಆಸ್ಪತ್ರೆ ವೈದ್ಯರ ಕಾರ್ಯವೈಖರಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 20:05 IST
Last Updated 29 ಮಾರ್ಚ್ 2020, 20:05 IST
ರಾಮನಗರ ಜಿಲ್ಲಾ ಆಸ್ಪತ್ರೆ
ರಾಮನಗರ ಜಿಲ್ಲಾ ಆಸ್ಪತ್ರೆ   

ರಾಮನಗರ: ಕೊರನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ದೇಶದಲ್ಲಿನ ವೈದ್ಯ ಸಮೂಹ ಅವಿರತ ದುಡಿಮೆಯಲ್ಲಿ ನಿರತವಾಗಿದೆ. ಆದರೆ, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರಲ್ಲಿ ಅನೇಕರು ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಮತ್ತೆ ಕೆಲವರು ಆಸ್ಪತ್ರೆಯತ್ತ ಮುಖ ಮಾಡಿಯೂ ಇಲ್ಲ.

ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ಕ್ಷೇತ್ರಗಳ ತಜ್ಞರೂ ಸೇರಿದಂತೆ ಒಟ್ಟು 26 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಎಲ್ಲ ವೈದ್ಯರೂ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ವೈದ್ಯಕೀಯ ಸಿಬ್ಬಂದಿಗೆ ರಜೆ ನೀಡದಂತೆಯೂ ಆದೇಶಿಸಿದೆ. ಹೀಗಿದ್ದೂ ಇಲ್ಲಿನ ವೈದ್ಯರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.

ಭಾನುವಾರ ಮಾಧ್ಯಮ ಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ 26 ವೈದ್ಯರ ಪೈಕಿ 8 ಮಂದಿ ಮಾತ್ರ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವುದು ಕಂಡು ಬಂದಿತು. ಅದರಲ್ಲೂ ಕೆಲವು ವೈದ್ಯರು ಹಾಜರಿ ಪುಸ್ತಕಕ್ಕೆ ಸಹಿ ಮಾಡಿ ಹೊರ ನಡೆದಿದ್ದರು. ಉಳಿದ 15 ವೈದ್ಯರು ಗೈರಾಗಿದ್ದರು. ಮೂವರನ್ನು ರಾತ್ರಿ ಪಾಳಿಗೆ ನಿಯೋಜಿಸಲಾಗಿತ್ತು.

ADVERTISEMENT

ಆರೋಪ: ಆರೋಗ್ಯ ಸಚಿವ ಬಿ. ಶ್ರೀರಾಮುಲು ಶನಿವಾರವಷ್ಟೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ಇತರ ಸಿಬ್ಬಂದಿಯನ್ನು ಹುರಿದುಂಬಿಸುವ ಕೆಲಸ ಮಾಡಿದ್ದರು. ಸಚಿವರು ಬಂದ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ವೈದ್ಯರು ನಂತರದಲ್ಲಿ ನಾಪತ್ತೆ ಆಗಿದ್ದರು. ಬಹುತೇಕ ಸಂದರ್ಭಗಳಲ್ಲಿ ವೈದ್ಯರು ಆಸ್ಪತ್ರೆಗೆ ಬರುವುದೇ ಇಲ್ಲ. ಪುಸ್ತಕದಲ್ಲಿ ಸಹಿ ಮಾಡಿ ಹೊರಗೆ ಖಾಸಗಿ ಸೇವೆಗಳಿಗೆ ತೆರಳುತ್ತಿದ್ದಾರೆ.

ಅನೇಕರು ಖಾಸಗಿ ಆಸ್ಪತ್ರೆಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಹುತೇಕರು ಬೆಂಗಳೂರಿನಿಂದಲೇ ಓಡಾಡಿಕೊಂಡಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಆಸ್ಪತ್ರೆಯನ್ನು ಸರಿಯಾಗಿ ನಿರ್ವಹಿಸದ ಕಾರಣಕ್ಕೆ ಜಿಲ್ಲಾ ಸರ್ಜನ್‌ ವಿಜಯನರಸಿಂಹ ಅವರನ್ನು ಸರ್ಕಾರ ಈಚೆಗಷ್ಟೇ ವರ್ಗಾವಣೆ ಮಾಡಿದೆ.

ಈ ಕುರಿತು ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಪದ್ಮಾ ಅವರನ್ನು ಸಂಪರ್ಕಿಸಿದಾಗ ‘ವೈದ್ಯರು ಗೈರಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ’ ಎಂದರು. ‘ಗೈರಾದ ವೈದ್ಯರಿಗೆ ನೋಟಿಸ್‌ ನೀಡಿ ವಿವರ ಪಡೆಯುತ್ತೇನೆ. ಈ ಬಗ್ಗೆ ಮೇಲಧಿಕಾರಿಗಳಿಗೂ ಪತ್ರ ಬರೆಯುತ್ತೇನೆ’ ಎಂದು ತಿಳಿಸಿದರು.

*
ಇಷ್ಟು ಪ್ರಮಾಣದಲ್ಲಿ ವೈದ್ಯರು ಗೈರಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅವರೆಲ್ಲರಿಗೂ ಕಾರಣ ಕೇಳಿ ನೋಟಿಸ್‌ ನೋಡುತ್ತೇನೆ.
-ಪದ್ಮಾ, ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕರು, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.