ADVERTISEMENT

ಬಿಜೆಪಿಯವರು ಕರೆದಿದ್ದಾರೆ: ಹರಿಹರ ಶಾಸಕ ರಾಮಪ್ಪ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 19:38 IST
Last Updated 11 ಜುಲೈ 2019, 19:38 IST

ದಾವಣಗೆರೆ: ‘ಬಿಜೆಪಿಯವರು ನನ್ನನ್ನೂ ಬರ್ರಿ ಬರ್ರಿ ಎಂದು ಒಂದು ವರ್ಷದಿಂದ ಕರೆಯುತ್ತಿದ್ದಾರೆ. ಇವತ್ತು ಬೆಳಿಗ್ಗೆನೂ ಕರೆ ಮಾಡಿದ್ದಾರೆ. ನಾನು ಪಕ್ಕಾ ಕಾಂಗ್ರೆಸಿಗ. ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ’ ಎಂದು ಹರಿಹರದ ಶಾಸಕ ಎಸ್‌. ರಾಮಪ್ಪ ಹೇಳಿದ್ದಾರೆ.

‘ಸಮ್ಮಿಶ್ರ ಸರ್ಕಾರ ಮುಂದುವರಿಯುತ್ತದೆ. ಆದರೆ, ಮುಖ್ಯಮಂತ್ರಿ ಬದಲಾಗಬಹುದು. ಯಾರು ಆಗುತ್ತಾರೆ ಎಂಬುದು ಗೊತ್ತಿಲ್ಲ. ಅದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ನಾನು ನಾಪತ್ತೆಯಾಗಿಲ್ಲ. ಧರ್ಮಸ್ಥಳಕ್ಕೆ ಪ್ರಕೃತಿ ಚಿಕಿತ್ಸೆಗೆ ಹೋಗಿದ್ದೆ. ವರಿಷ್ಠರ ಆದೇಶದಂತೆ ಬೆಂಗಳೂರಿಗೆ ಹೋಗುತ್ತಿದ್ದೇನೆ. ನಾನು ದುಡ್ಡಿನ ಹಿಂದೆ ಹೋಗುವ ಮನುಷ್ಯನಲ್ಲ. ಕ್ಷೇತ್ರದಲ್ಲಿ ಸುಮಾರು 64 ಸಾವಿರ ಜನ ನನಗೆ ಮತ ಹಾಕಿದ್ದಾರೆ. ಅವರ ಋಣ ನನ್ನ ಮೇಲಿದೆ. ಅದನ್ನು ತೀರಿಸಬೇಕು. ಅಲ್ಲದೇ ಪಕ್ಷ ನನ್ನನ್ನು ಗುರುತಿಸಿ ಎರಡು ಬಾರಿ ‘ಬಿ’ ಫಾರ್ಮ್‌ ನೀಡಿದೆ. ಇದನ್ನೆಲ್ಲ ಮರೆಯಲಾಗುವುದಿಲ್ಲ’ ಎಂದು ಪಕ್ಷನಿಷ್ಠೆ ಪ್ರದರ್ಶಿಸಿದರು.

ADVERTISEMENT

‘ರಾಮಪ್ಪ ಪಕ್ಷ ಬಿಟ್ಟು ಬರುವವನಲ್ಲ ಎಂದು ಬಿಜೆಪಿಯವರಿಗೂ ಗೊತ್ತಿದೆ. ನಾನು ಈಶ್ವರಪ್ಪ ಅವರನ್ನು ಇತ್ತೀಚೆಗೆ ಭೇಟಿ ಮಾಡಿಲ್ಲ. ಏಳೆಂಟು ತಿಂಗಳ ಹಿಂದೆ ಸಮಾಜದ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರೂ ಈ ಬಗ್ಗೆ ನಾವು ಮಾತನಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.