ADVERTISEMENT

ರಮೇಶ ಬಿಜೆಪಿ ಸೇರ್ಪಡೆ ರಿಲೀಸ್ ಆಗದ ಸಿನಿಮಾ: ಸತೀಶ ಜಾರಕಿಹೊಳಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 11:30 IST
Last Updated 1 ಡಿಸೆಂಬರ್ 2019, 11:30 IST
   

ಬೆಳಗಾವಿ: ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗುವ ವಿಚಾರ ರಿಲೀಸ್ ಆಗದ ಸಿನಿಮಾ ಇದ್ದಂತೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

ಬಹಳ ಜನ ಸಿನಿಮಾ ಮಾಡಿ‌ ಡಬ್ಬಿಯಲ್ಲೇ ಇಟ್ಟಿರುತ್ತಾರೆ. ಹಾಗೆಯೇ ರಮೇಶ ಜಾರಕಿಹೊಳಿ ಕತೆಯೂ ಆಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಅವರಿಗೆ ಮುಖ್ಯಮಂತ್ರಿ ಎಚ್.ಡಿ.‌ಕುಮಾರಸ್ವಾಮಿ 2 ತಿಂಗಳ ಹಿಂದೆಯೇ ಸಚಿವ ಸ್ಥಾನದ ಆಫರ್ ಕೊಟ್ಟಿದ್ದರು. ಮುಖ್ಯಮಂತ್ರಿ ಆಫರ್ ಕೊಟ್ಟರೂ ಸುಮ್ಮನಾಗುವುದಿಲ್ಲ. ನಮ್ಮ ಸರ್ಕಾರ ಅಲುಗಾಡಿಸುವುದನ್ನುಬಿಡುವುದಿಲ್ಲ. ಅವರು ಕಾಂಗ್ರೆಸ್ ಪಕ್ಷದಿಂದ ಕಾಲು ಹೊರಗಿಟ್ಟು ಬಹಳ ದಿನಗಳೇ ಆಗಿವೆ. ಹೀಗಾಗಿ, ಅವರ ಮನವೊಲಿಸುವುದನ್ನು ಬಿಟ್ಟು ಬಿಡಿ ಎಂದು ಮುಖ್ಯಮಂತ್ರಿಗೆ ಶುಕ್ರವಾರ ತಿಳಿಸಿದ್ದೇನೆ ಎಂದು ಹೇಳಿದರು.

ADVERTISEMENT

ಮೇ 30ರ ನಂತರ ರಾಜ್ಯದಲ್ಲಿ ಆಪರೇಷನ್ ಕಮಲ ಆರಂಭವಾಗಲಿದೆ. ರಮೇಶ‌ ಬಳಿ ಸರ್ಕಾರಕ್ಕೆ‌ ತೊಂದರೆ ಮಾಡುವಷ್ಟು ಸಂಖ್ಯಾಬಲ ಇಲ್ಲ. ಆದರೂ ತೊಂದರೆ ಕೊಡುವುದನ್ನುನಿಲ್ಲಿಸುವುದಿಲ್ಲ ಎಂದು ಹೇಳಿದರು.

ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂದೆ ಹೇಗಿರುತ್ತಾರೆ ಎನ್ನುವುದನ್ನು ಕಾದು ನೋಡೋಣ ಎಂದರು.

ಇಷ್ಟು ದಿನ ಕಾಂಗ್ರೆಸ್- ಜೆಡಿಎಸ್ ನಡುವೆ ಭಿನ್ನಾಭಿಪ್ರಾಯ ಇದ್ದವು ಎನ್ನುವುದನ್ನು ಒಪ್ಪಿಕೊಂಡ ಅವರು, ಮೋದಿ ಹೊಡೆತದಿಂದಾಗಿ ನಾವೆಲ್ಲರೂ ಒಂದಾಗಿದ್ದೇವೆ. ಅವರು ಕೊಟ್ಟಿರುವ ಔಷಧ ಫಲ‌ ಕೊಟ್ಟಿದೆ. ಹೀಗಾಗಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಿದ್ಧತೆ ನಡೆಸಿದ್ದೇವೆ. ರಿವರ್ಸ್ ಆಪರೇಷನ್ ಮಾಡುವುದಕ್ಕೂ ಸಿದ್ಧವಿದ್ದೇವೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಎನ್ನುವುದು ಈಗ ಮುಗಿದ ಅಧ್ಯಾಯವಾಗಿದೆ. ಉಳಿದ 4 ವರ್ಷ ಲೆಫ್ಟ್, ರೈಟ್ ಅಂತ ಕವಾಯತು ಮಾಡಿಕೊಂಡು‌ ಹೋಗಲೇಬೇಕು. ಕಮಾಂಡರ್ ಹೇಳಿದಂತೆ ಪರೇಡ್ ಮಾಡುವುದಷ್ಟೇ ನಮ್ಮ ಕೆಲಸ ಎಂದು ಮಾರ್ಮಿಕವಾಗಿ‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.