ADVERTISEMENT

ವಿಜಯೇಂದ್ರ ಬಚ್ಚಾ, ಅಧ್ಯಕ್ಷನಾಗಲು ಯೋಗ್ಯನಲ್ಲ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 15:28 IST
Last Updated 18 ಜನವರಿ 2025, 15:28 IST
<div class="paragraphs"><p>ಬಿ.ವೈ. ವಿಜಯೇಂದ್ರ, ರಮೇಶ ಜಾರಕಿಹೊಳಿ</p></div>

ಬಿ.ವೈ. ವಿಜಯೇಂದ್ರ, ರಮೇಶ ಜಾರಕಿಹೊಳಿ

   

ಅಂಕಲಗಿ (ಬೆಳಗಾವಿ ಜಿಲ್ಲೆ): ‘ವಿಜಯೇಂದ್ರ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ. ಅವನಿಗೆ ನಾನು ಎಚ್ಚರಿಕೆ ಕೊಡುತ್ತೇನೆ. ನೀನು ಇನ್ನೂ ಬಚ್ಚಾ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಲು ಯೋಗ್ಯನಲ್ಲ’ ಎಂದು ಶಾಸಕ ರಮೇಶ ಜಾರಕಿಹೊಳಿ ತಿರುಗೇಟು ನೀಡಿದರು.

ಜಿಲ್ಲೆಯ ಗೋಕಾಕ ತಾಲ್ಲೂಕಿನ ಅಂಕಲಗಿ ಗ್ರಾಮದಲ್ಲಿ ಶನಿವಾರ ₹92 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ನಾನು ನಿ‍ಮ್ಮ ಅಪ್ಪನನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ಬಿಜೆಪಿಗೆ ಬಂದಿದ್ದೇನೆ ವಿಜಯೇಂದ್ರ. ನನ್ನ ಕ್ಷೇತ್ರದ ಜನ ನನ್ನೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ಯಾರ ಭಯವೂ ಇಲ್ಲ’ ಎಂದರು.

‘ನನಗೆ ಯಡಿಯೂರಪ್ಪ ಬಗ್ಗೆ ಅಪಾರ ಗೌರವವಿದೆ. ಈಗಲೂ ಅವರೇ ನಮ್ಮ ನಾಯಕ. ಆದರೆ, ನಾಯಕನಾಗುವ ಯೋಗ್ಯತೆ ವಿಜಯೇಂದ್ರಗೆ ಇಲ್ಲ. ಅದಕ್ಕಾಗಿಯೇ ಅವನನ್ನು ಕೆಳಗಿಳಿಸಲು ಹೋರಾಡುತ್ತಿದ್ದೇವೆ’ ಎಂದು ಏಕವಚನದಲ್ಲೇ ತರಾಟೆ ತೆಗೆದುಕೊಂಡರು.

‘ಯಡಿಯೂರ‍ಪ್ಪ ವಿರುದ್ಧ ಮಾತನಾಡಿದರೆ ರಾಜ್ಯದಲ್ಲಿ ಓಡಾಡುವುದು ಕಷ್ಟವಾಗುತ್ತದೆ’ ಎಂದು ವಿಜಯೇಂದ್ರ ಹೇಳಿದ್ದಾನೆ. ನಾನು ನೇರಾನೇರ ‘ಚಾಲೇಂಜ್‌’ ಮಾಡುತ್ತಿದ್ದೇನೆ. ವಿಜಯೇಂದ್ರ ನೀನು ದಿನಾಂಕ ‘ಫಿಕ್ಸ್’ ಮಾಡಿ ಹೇಳು. ಶಿಕಾರಿಪುರದಲ್ಲೇ ಪ್ರವಾಸ ಮಾಡುತ್ತೇನೆ’ ಎಂದೂ ಬಹಿರಂಗ ಸವಾಲು ಹಾಕಿದರು.

‘ನಾನು ರಕ್ಷಣೆಗೆ ಪೊಲೀಸ್‌ ಪಡೆ ಅಥವಾ ಗನ್‌ ತರುವುದಿಲ್ಲ. ಒಬ್ಬನೇ ಬರುತ್ತೇನೆ. ಆ ತಾಕತ್ತು ನನಗಿದೆ. ಆದರೆ, ನಿನ್ನನ್ನು ರಾಜ್ಯದಲ್ಲಿ ಓಡಾಡದ ಹಾಗೆ ಮಾಡುವ ತಾಕತ್ತನ್ನೂ ದೇವರು ನನಗೆ ಕೊಟ್ಟಿದ್ದಾನೆ’ ಎಂದೂ ತಿರುಗೇಟು ನೀಡಿದರು.

‘ಯಡಿಯೂರಪ್ಪ ಅವರಿಗೂ ನಾನು ಹೇಳುವುದು ಒಂದೇ; ವಿಜಯೇಂದ್ರನ ಬೆನ್ನು ಹತ್ತಿ ಹಾಳಾಗುತ್ತಿದ್ದೀರಿ. ಬಿಜೆಪಿ ರಾಜ್ಯ ಘಟಕಕ್ಕೆ ಒಳ್ಳೆಯ ಅಧ್ಯಕ್ಷ ಬರಲು ಅವಕಾಶ ಕೊಡಿ. ಅವರಿಗೆ ಮಾರ್ಗದರ್ಶನ ಮಾಡಿ. ನಿಮ್ಮಿಂದ ಪಕ್ಷಕ್ಕೆ ಒಳ್ಳೆಯದಾಗಿದೆ. ಆದರೆ, ನೀವು ಪಕ್ಷದಿಂದ ಸಾವಿರಪಟ್ಟು ಲಾಭ ಪಡೆದಿದ್ದೀರಿ’ ಎಂದೂ ಅವರು ಕಿಡಿ ಕಾರಿದರು.

‘ರಾಜ್ಯ ಸರ್ಕಾರ ಕಾಂಗ್ರೆಸ್‌ ಪಕ್ಷದ ಎಟಿಎಂ ಆಗಿದೆ. ಗ್ಯಾರಂಟಿ ಯೋಜನೆಗಳಿಗೆ ಪ್ರತಿ ತಿಂಗಳು ₹70 ಸಾವಿರ ಕೋಟಿ ಹೋಗುತ್ತಿದೆ. ಅದನ್ನು ಸರಿದೂಗಿಸಲು ತೆರಿಗೆ ಎರಡು ಪಟ್ಟು ಹೆಚ್ಚಳ ಮಾಡಲಾಗಿದೆ. ಜನ ಬೇಸತ್ತಿದ್ದಾರೆ. ಮತ್ತೆ ಯಾವುದೇ ಕ್ಷಣದಲ್ಲಿ ಚುನಾವಣೆ ಬರಬಹುದು. ನಾವು ಪಕ್ಷ ಗಟ್ಟಿ ಮಾಡಲು ಓಡಾಡುತ್ತಿದ್ದೇವೆ’ ಎಂದೂ ಅವರು ಹೇಳಿದರು.

‘ಜಾತಿ ಗಣತಿ ಜಾರಿಯಾಗಲಿ’

‘ಜಾತಿ ಗಣತಿ ವಿಚಾರದಲ್ಲಿ ಬಿಜೆಪಿ ನಿಲುವು ಏನೇ ಇರಬಹುದು. ಆದರೆ, ನನ್ನ ನಿಲುವು ಇದು ಜಾರಿಯಾಗಲೇಬೇಕು ಎಂಬುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಏಕೆ ಹಿಂದೇಟು ಹಾಕುತ್ತಿದ್ದಾರೋ ಕಾಣೆ. ಕನಕಪುರ ಮನುಷ್ಯ ಘರ್ಜನೆ ಮಾಡಿದರೆ ಇವರು ಹೆದರುತ್ತಾರೆ’ ಎಂದು ರಮೇಶ ಜಾರಕಿಹೊಳಿ ಹೇಳಿದರು.

‘ಸಿದ್ದರಾಮಯ್ಯ ಬಗ್ಗೆ ಗೌರವವಿದೆ. ಆದರೆ, ಅಹಿಂದ ನಾಯಕರಾಗಿ ಅವರಿಗೆ ಉಳಿಗಾಲವಿಲ್ಲ. ಡಿ.ಕೆ.ಶಿವಕುಮಾರ್‌ ಸೇರಿ ಕೆಲವು ನಾಯಕರು ಅವರನ್ನು ಹೆದರಿಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅಹಿಂದ ನಾಯಕರಾಗಿಯೇ ಆಡಳಿತ ಪೂರ್ಣಗೊಳಿಸಬೇಕು. ಘರ್ಜಿಸಿಯೇ ನಿವೃತ್ತಿ ಹೊಂದಬೇಕು’ ಎಂದೂ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.