ADVERTISEMENT

ಹನಿಟ್ರ್ಯಾಪ್‌: ಎಸ್‌ಐಟಿ ಬದಲು ನ್ಯಾಯಾಲಯಕ್ಕೆ ಹಾಜರು ?

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 21:31 IST
Last Updated 8 ಏಪ್ರಿಲ್ 2021, 21:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಿ.ಡಿ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಹನಿಟ್ರ್ಯಾಪ್ ಆಯಾಮದಲ್ಲಿ ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಪಟ್ಟ ಕೆಲ ವ್ಯಕ್ತಿಗಳು ನ್ಯಾಯಾಲಯದ ಎದುರು ಹಾಜರಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆ ಬಗ್ಗೆ ವಕೀಲರ ಜೊತೆ ಮಾತುಕತೆ ನಡೆಸಿರುವುದಾಗಿ ಗೊತ್ತಾಗಿದೆ.

ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ವಿಚಾರಣೆ ಹಾಗೂ ವೈದ್ಯಕೀಯ ಪರೀಕ್ಷೆ ಮುಕ್ತಾಯವಾಗಿದೆ. ಆರೋಪಿಯೂ ಆದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರು ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇದ್ದಾರೆ. ಹೀಗಾಗಿ, ಈ ಪ್ರಕರಣದ ತನಿಖೆ ಸದ್ಯಕ್ಕೆ ನಿಧಾನಗತಿಯಲ್ಲಿ ಸಾಗಿದೆ.

ಸದಾಶಿವನಗರ ಠಾಣೆಯಲ್ಲಿ ರಮೇಶ ಜಾರಕಿಹೊಳಿ ದಾಖಲಿಸಿದ್ದ ಬ್ಲ್ಯಾಕ್‌ಮೇಲ್ ಹಾಗೂ ಸುಲಿಗೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ತನಿಖಾಧಿಕಾರಿ ಧರ್ಮೇಂದ್ರ ನೇತೃತ್ವದ ತಂಡ, ಸಿ.ಡಿ. ಸೃಷ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾದ ವ್ಯಕ್ತಿಗಳಿಗಾಗಿ ಹೊರ ರಾಜ್ಯಗಳಲ್ಲಿ ಶೋಧ ಆರಂಭಿಸಿದ್ದಾರೆ. ಬಂಧನ ಭೀತಿಯಲ್ಲಿರುವ ವ್ಯಕ್ತಿಗಳು, ಎಸ್‌ಐಟಿ ಕೈಗೆ ಸಿಗುವುದಕ್ಕೂ ಮುನ್ನವೇ ಯುವತಿಯ ರೀತಿಯಲ್ಲೇ ನ್ಯಾಯಾಲಯದ ಎದುರು ಹಾಜರಾಗಲು ಯೋಚಿಸಿರುವುದಾಗಿ ಗೊತ್ತಾಗಿದೆ.

ADVERTISEMENT

ವ್ಯವಸ್ಥಿತ ಸಂಚು: ‘ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿ, ನಂತರ ಕೆಲಸ ಬಿಟ್ಟಿದ್ದ ಇಬ್ಬರು ವ್ಯವಸ್ಥಿತ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ರಮೇಶ ಜಾರಕಿಹೊಳಿ ಅವರಿಗೆ ಪರಿಚಯವಿದ್ದ ಯುವತಿಯನ್ನು ಮುಂದಿಟ್ಟುಕೊಂಡು ಸಿ.ಡಿ ಮಾಡಿ ಬ್ಲ್ಯಾಕ್‌ಮೇಲ್ ಹಾಗೂ ಸುಲಿಗೆ ಮಾಡಿರುವ ಮಾಹಿತಿ ಇದೆ. ಅವರಿಬ್ಬರು ಸಿಕ್ಕರೆ ತನಿಖೆಗೆ ಹೊಸ ಆಯಾಮವೇ ಸಿಗಲಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಈಗಾಗಲೇ ಹಲವು ಬಾರಿ ನೋಟಿಸ್‌ಗಳನ್ನು ನೀಡಲಾಗಿದೆ. ಯಾರೊಬ್ಬರೂ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ, ಅವರಿಗಾಗಿ ನಾವೇ ಹುಡುಕಾಟ ನಡೆಸುತ್ತಿದ್ದೇವೆ’ ಎಂದೂ ತಿಳಿಸಿವೆ.

ದಿನಕ್ಕೊಂದು ಸ್ಥಳ ಬದಲು: ಸಂತ್ರಸ್ತೆಗೆ ಕಾವಲು
ಸಿ.ಡಿ. ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಅಜ್ಞಾತ ಸ್ಥಳದಲ್ಲಿದ್ದ ಸಂತ್ರಸ್ತೆ, ಮಾರ್ಚ್ 28ರಂದು ನ್ಯಾಯಾಲಯದ ಎದುರು ಹಾಜರಾಗಿ ಹೇಳಿಕೆ ನೀಡಿ ಎಸ್‌ಐಟಿ ತನಿಖಾಧಿಕಾರಿ ಎದುರು ವಿಚಾರಣೆ ಎದುರಿಸಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ, ಧ್ವನಿ ಮಾದರಿ, ಹೇಳಿಕೆ ಸಂಗ್ರಹ ಸೇರಿ ತನಿಖಾ ಪ್ರಕ್ರಿಯೆಗಳು ಎಲ್ಲವೂ ಮುಗಿದಿವೆ.

ಬೆಂಗಳೂರಿನ ಪ್ರಮುಖ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿರುವ ಸಂತ್ರಸ್ತೆ, ದಿನಕ್ಕೊಂದು ಸ್ಥಳ ಬದಲಿಸುತ್ತಿದ್ದಾರೆ. ಸಂತ್ರಸ್ತೆಗೆ ಖಾಸಗಿ ಕಾವಲು ಸಹ ಇದ್ದು, ಪೊಲೀಸರ ಭದ್ರತೆಯನ್ನೂ ನೀಡಲಾಗಿದೆ. ಎಸ್‌ಐಟಿ ಅಧಿಕಾರಿಗಳು ಪುನಃ ವಿಚಾರಣೆಗೆ ಕರೆಯಬಹುದೆಂಬ ಕಾರಣಕ್ಕೆ ಸಂತ್ರಸ್ತೆ, ನಗರದಲ್ಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.