ADVERTISEMENT

ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ಆರ್‌ಎಸ್‌ಎಸ್ ನಾಯಕ ಅರವಿಂದರಾವ್ ಗೋಪ್ಯ ಮಾತುಕತೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 10:21 IST
Last Updated 26 ಜೂನ್ 2021, 10:21 IST
ಶಾಸಕ ರಮೇಶ ಜಾರಕಿಹೊಳಿ
ಶಾಸಕ ರಮೇಶ ಜಾರಕಿಹೊಳಿ   

ಅಥಣಿ / ಬೆಳಗಾವಿ: ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಆರ್‌ಎಸ್‌ಎಸ್‌ ಮುಖಂಡ ಅರವಿಂದರಾವ್ ದೇಶಪಾಂಡೆ ಅವರೊಂದಿಗೆ ಶನಿವಾರ ಗೋಪ್ಯ ಮಾತುಕತೆ ನಡೆಸಿದರು.

ಇಲ್ಲಿನ ಅವರ ಮನೆಯಲ್ಲಿ ಭೇಟಿಯಾಗಿ, ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿರುವ ಅವರು, ಮುಂಬೈನಲ್ಲಿ ಮಹಾರಾಷ್ಟ್ರದ ವಿಧಾನಸಭೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಅವರೊಂದಿಗೆ ಈಚೆಗೆ ಮಾತುಕತೆ ನಡೆಸಿದ್ದರು. ನಾಗಪುರದ ಆರ್‌ಎಸ್‌ಎಸ್‌ ಕಚೇರಿಗೂ ಭೇಟಿ ನೀಡಿದ್ದರು. ಶುಕ್ರವಾರ ಮೈಸೂರಿನಲ್ಲಿ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನೂ ಭೇಟಿಯಾಗಿದ್ದರು. ಈಗ, ಆರ್‌ಎಸ್‌ಎಸ್ ಪ್ರಭಾವಿ ಮುಖಂಡರೊಂದಿಗೆ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಭೇಟಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ರಮೇಶ ನಿರಾಕರಿಸಿದರು.

ಸವದಿ ಪ್ರತಿಕ್ರಿಯೆ:ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಅಥಣಿಯಲ್ಲಿದ್ದಾಗ ಆರ್‌ಎಸ್‌ಎಸ್ ಪ್ರಮುಖರನ್ನು ನಾನು ಆಗಾಗ ಭೇಟಿ ಆಗುತ್ತಿರುತ್ತೇನೆ. ಅವರಿಂದ ಮಾರ್ಗದರ್ಶನ ಪಡೆಯಲು ಎಲ್ಲರೂ ಹೋಗುತ್ತಾರೆ. ಅವರು ಹೋಗಿದ್ದಕ್ಕೇಕೆ ಹೆಚ್ಚು ಆದ್ಯತೆ ಕೊಡುತ್ತಿದ್ದೀರಿ?’ ಎಂದು ಕೇಳಿದರು.

‘ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ನನಗೆ ಗೊತ್ತಿಲ್ಲ. ಸಿಕ್ಕಾಗ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಬಿಜೆಪಿಯಲ್ಲಿನ ಕೆಲವರು ಬೆನ್ನಿಗೆ ಚೂರಿ ಹಾಕಿದ್ದಾರೆ’ ಎಂಬ ರಮೇಶ ಹೇಳಿಕೆಗೆ, ‘ಅವರು ಯಾವ ಆಲೋಚನೆ ಇಟ್ಟುಕೊಂಡು ಅಥವಾ ಸಂದರ್ಭದಲ್ಲಿ ಹೇಳಿದ್ದಾರೆಯೋ ಗೊತ್ತಿಲ್ಲ. ಕೇಳಿ ತಿಳಿದುಕೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.