ADVERTISEMENT

ಸಿ.ಡಿ ಪ್ರಕರಣ: ಪ್ರತಿಭಟನೆಗಳು ತನಿಖೆ ಮೇಲೆ ಪ್ರಭಾವ ಬೀರಲ್ಲ -ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:47 IST
Last Updated 29 ಮಾರ್ಚ್ 2021, 2:47 IST
   

ಬೆಂಗಳೂರು: ‘ರಮೇಶ ಜಾರಕಿಹೊಳಿ ಸಿ.ಡಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳು ಎಸ್‌ಐಟಿ ತನಿಖೆ ಮೇಲೆ ಯಾವುದೇ ಪ್ರಭಾವಬೀರುವುದಿಲ್ಲ’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಪ್ರತಿಭಟನೆಗಳು ಅಲ್ಲಲ್ಲಿ‌ ನಡೆಯುತ್ತವೆ. ಅವುಗಳನ್ನು ಸ್ಥಳೀಯ ಪೊಲೀಸರು ನೋಡಿಕೊಳ್ಳುತ್ತಾರೆ. ನಮ್ಮ ತನಿಖೆ ಕ್ರಮಬದ್ಧವಾಗಿ, ವೈಜ್ಞಾನಿಕವಾಗಿನಡೆಯಲಿದೆ. ಎಸ್‌ಐಟಿಗೆ ನಾವು ಸ್ವಾತಂತ್ರ್ಯ ನೀಡಿದ್ದೇವೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ’ ಎಂದರು.

‘ಸಿ.ಡಿ ಯುವತಿಗೆ ರಕ್ಷಣೆ ನೀಡಲು ನಾವು ಈಗಲೂ ಬದ್ಧ. ಈಗಾಗಲೇ ಯುವತಿಗೆ ಐದು ಬಾರಿ ನೋಟಿಸ್‌ ನೀಡಿದ್ದೇವೆ. ಯುವತಿ ಇರುವ ಕಡೆಗೆ ಹೋಗಿ ರಕ್ಷಣೆ ನೀಡುತ್ತೇವೆ. ಅವರ ಕುಟುಂಬ ಸದಸ್ಯರಿಗೆ ರಕ್ಷಣೆ ನೀಡಲಾಗಿದೆ. ಪೊಲೀಸರ ನೈತಿಕತೆ ಕುಗ್ಗಿಸುವ ಕೆಲಸವನ್ನು ಯಾರೂ ಮಾಡಬಾರದು. ಎಸ್‌ಐಟಿ ತಂಡ ಕ್ರಮಬದ್ಧವಾಗಿ, ಸರಿಯಾದ ದಾರಿಯಲ್ಲಿ ತನಿಖೆ ನಡೆಸುತ್ತಿದೆ’ ಎಂದರು.

ADVERTISEMENT

‘ಸಿದ್ದರಾಮಯ್ಯ ಅವರಿಗೆ ನೆನಪಿನ ಶಕ್ತಿ ಕಡಿಮೆ ಇದೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಅಂದಿನ ಸಚಿವ ಎಚ್.ವೈ.ಮೇಟಿ ಸಿ.ಡಿ ಪ್ರಕರಣದಲ್ಲಿ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಕರಣವನ್ನು ಸಿಐಡಿಗೆ ಕೊಟ್ಟು ಮೇಟಿ ಪ್ರಕರಣ ಮುಚ್ಚಿ ಹಾಕಿದರು. ಯುವತಿ ದೂರು ನೀಡಿದರೂ ಪ್ರಕರಣ ದಾಖಲಿಸಲಿಲ್ಲ. ಒಬ್ಬ ಅಧಿಕಾರಿಯೇ ವಿಚಾರಣೆ ಮಾಡಿ ಮೇಟಿ ಅವರಿಗೆ ಕ್ಲೀನ್ ಚಿಟ್ ನೀಡಿದರು. ಇದೇ ವಿಷಯವನ್ನು ಅಧಿವೇಶನದಲ್ಲಿ ಹೇಳಿದ್ದೇನೆ’ ಎಂದು ಬೊಮ್ಮಾಯಿ ಹೇಳಿದರು.

ಅತ್ಯಾಚಾರ ಆರೋಪಿಯನ್ನು ಗೂಳಿಯಂತೆ ಬಿಟ್ಟಿದೆ: ಕಾಂಗ್ರೆಸ್‌
ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ. ಪ್ರಕರಣ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿರುವ ಮಧ್ಯೆ ಬಿಜೆಪಿ– ಕಾಂಗ್ರೆಸ್‌ ನಡುವೆ ಟ್ವೀಟ್ ಸಮರ ಜೋರಾಗಿದೆ.

ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ರಮೇಶ್ ಜಾರಕಿಹೊಳಿಯ ಚಡ್ಡಿಯ ಲಾಡಿಯೂ ಸಡಿಲ, ನಾಲಿಗೆಯೂ ಸಡಿಲ, ಬುದ್ದಿಯೂ ಸಡಿಲ ಎನ್ನುವುದನ್ನು ಜಗತ್ತು ನೋಡಿದೆ. ರಾಜ್ಯದ ಮರ್ಯಾದೆ ದಿನದಿನಕ್ಕೂ ಕುಸಿಯುತ್ತಿದೆ. ಹೀಗಿದ್ದರೂ ಅತ್ಯಾಚಾರಿ ಆರೋಪಿಯನ್ನು ಗೂಳಿಯಂತೆ ತಿರುಗಲು ಬಿಟ್ಟಿದ್ದು ಸರ್ಕಾರದ ನೀಚತನವೋ ಅಥವಾ ಪೊಲೀಸರ ಹೇಡಿತನವೋ ಗೃಹ ಸಚಿವ ಬಸರಾಜ ಬೊಮ್ಮಾಯಿಯವರೇ’ ಎಂದು ಪ್ರಶ್ನಿಸಿದೆ.

**

ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿ.ಡಿ ಸರ್ಕಾರ, ತನ್ನ ಅಕ್ರಮ ಚಟುವಟಿಕೆಯ ಸಿ.ಡಿಗಳನ್ನು ರಕ್ಷಿಸಿಕೊಳ್ಳಲು ನಾಟಕ ಮಾಡುತ್ತಿದೆ. ಈ ಸರ್ಕಾರಕ್ಕೆ ರಾಜ್ಯದ ಜನರ ಸಮಸ್ಯೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ.
-ಡಿ.ಕೆ. ಸುರೇಶ್, ಕಾಂಗ್ರೆಸ್‌ ಸಂಸದ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.