ADVERTISEMENT

ಸಿ.ಡಿ.ಪ್ರಕರಣ: ಯುವತಿ ಪೋಷಕರು ಎಸ್‌ಐಟಿ ಅಧಿಕಾರಿಗಳ ಮುಂದೆ ಹಾಜರು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 6:15 IST
Last Updated 27 ಮಾರ್ಚ್ 2021, 6:15 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ. ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿ.ಡಿ.ಯಲ್ಲಿದ್ದ ಯುವತಿ ಪೋಷಕರು, ವಿಶೇಷ ತನಿಖಾ ತಂಡದ (ಎಸ್ಐಟಿ) ಎದುರು ಶನಿವಾರ ಬೆಳಿಗ್ಗೆ ಹಾಜರಾಗಿದ್ದಾರೆ.

ಅಜ್ಞಾತ ಸ್ಥಳದಲ್ಲಿರುವ ಯುವತಿ, ಈಗಾಗಲೇ ನಾಲ್ಕು ವಿಡಿಯೊ ಹರಿಬಿಟ್ಟಿದ್ದಾರೆ. ರಮೇಶ ಜಾರಕಿಹೊಳಿ, ಎಸ್ಐಟಿ ಹಾಗೂ ಪೊಲೀಸರ ವಿರುದ್ಧ ಹಲವು ಆರೋಪಗಳನ್ನು‌ ಮಾಡಿದ್ದಾರೆ.

ಪ್ರಕರಣ ಸಂಬಂಧ ಮಾಹಿತಿ ಕಲೆಹಾಕಲು ಎಸ್ಐಟಿ ಅಧಿಕಾರಿಗಳು, ಯುವತಿ ಹಾಗೂ ಅವರ ಪೋಷಕರಿಗೆ ನೋಟಿಸ್ ನೀಡಿದ್ದಾರೆ. ಅದರಂತೆ ಯುವತಿಯ ತಂದೆ-ತಾಯಿ ಹಾಗೂ ಇಬ್ಬರು ಸಹೋದರರು ವಿಚಾರಣೆಗೆ ಬಂದಿದ್ದಾರೆ.

ಆಡುಗೋಡಿಯಲ್ಲಿರುವ ಸಿಸಿಬಿಯ ವಿಶೇಷ ವಿಚಾರಣೆ ಕೊಠಡಿಯಲ್ಲಿ, ವಿಚಾರಣೆ ನಡೆಯುತ್ತಿದೆ. ಎಲ್ಲೆಡೆ ಹರಿದಾಡುತ್ತಿರುವ ಆಡಿಯೊ ಬಗ್ಗೆಯೂ ಎಸ್ಐಟಿ ಮಾಹಿತಿ ಕಲೆಹಾಕುತ್ತಿದೆ.

ರಮೇಶ ಬಂಧನಕ್ಕೆ ಆಗ್ರಹ: ಯುವತಿ ದೂರು ಆಧರಿಸಿ ಎಫ್ಐಆರ್ ದಾಖಲಾಗಿದ್ದು ಆರೋಪಿ ರಮೇಶ ಜಾರಕಿಹೊಳಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ವಕೀಲ ಕೆ.ಎನ್. ಜಗದೀಶ್ ಕುಮಾರ್ ಆಗ್ರಹಿಸಿದ್ದಾರೆ.

'ರಮೇಶ ಸಾಕ್ಷ್ಯ ನಾಶ ಮಾಡುವ ಹಾಗೂ ಯುವತಿ ಮತ್ತು ಅವರ ಕಡೆಯವರಿಗೆ ಬೆದರಿಕೆ ಹಾಕುವ ಸಾಧ್ಯತೆ‌ ಇದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.