ADVERTISEMENT

ವೈಯಕ್ತಿಕ ಆರೋಪ, ಚೇಷ್ಟೆಗಳು ಬೇಡ: ರಮೇಶ್‌ ಕುಮಾರ್

ಮೌಲ್ಯಾಧಾರಿತ ಹೋರಾಟ ಮಾಡೋಣ; ರಮೇಶ್‌ ಕುಮಾರ್‌ ಪತ್ರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 19:43 IST
Last Updated 22 ನವೆಂಬರ್ 2019, 19:43 IST
ಕೆ. ಆರ್. ರಮೇಶ್‍ಕುಮಾರ್
ಕೆ. ಆರ್. ರಮೇಶ್‍ಕುಮಾರ್   

ಬೆಂಗಳೂರು: ‘ಈ ಉಪಚುನಾವಣೆ ಒಂದು ಮೌಲ್ಯಾಧಾರಿತ ಹೋರಾಟ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ನಮ್ಮದು’ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದ್ದಾರೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ ಪಕ್ಷದ ನಾಯಕರು ಚುನಾವಣೆಗಳ ವೇದಿಕೆಗಳ ಮೇಲೆ ವೈಯಕ್ತಿಕ ಆರೋಪಗಳು, ಚಾರಿತ್ರ್ಯ ವಧೆ ಮಾಡುವ ಚೇಷ್ಟೆಗಳು, ಅಸಂಬದ್ಧ ವಿಚಾರಗಳನ್ನು ಪ್ರಸ್ತಾಪಿಸುವುದನ್ನು ಬಿಡಬೇಕು. ಸಂವಿಧಾನಕ್ಕೆ ನಿಷ್ಠೆಯನ್ನು ವ್ಯಕ್ತಪಡಿಸಿ ವಿನಯ ಮತ್ತು ವಿಧೇಯತೆಯಿಂದ ಜನರಲ್ಲಿ ಮೌಲ್ಯಾಧಾರಿತ ಹೋರಾಟ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.

ಸಾಮಾನ್ಯ ಜನರು ಅಸಹ್ಯಪಡುವ, ಪದೇ ಪದೇ ನೋಡಿ ಬೇಸತ್ತು ಹೋಗಿರುವ ಭ್ರಷ್ಟರನ್ನೇ ಮುಖಂಡರು ಎಂದು ಜನ ಭಾವಿಸುವ ಅಪಾಯವಿದೆ. ಇಂತಹ ಮುಖಂಡರು ವೇದಿಕೆಗಳ ಮೇಲೆ ವಿಜೃಂಭಿಸಿದರೆ ಭವಿಷ್ಯದಲ್ಲಿ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ಸಾಮಾನ್ಯ ಜನರ ಮನೋಭಾವ, ಆಶೋತ್ತರಗಳನ್ನು ಗಮನಿಸಿ ಗೌರವಿಸಿದರೆ ಅದು ಸಹಜವಾಗಿಯೇ ಸಂವಿಧಾನಕ್ಕೆ ತೋರಿಸುವ ಗೌರವವಾಗುತ್ತದೆ. ಕಾರಣಾಂತರಗಳಿಂದ ಒಂದು ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವ ಸ್ಥಾನದಲ್ಲಿದ್ದಾಗ ಇಕ್ಕಟ್ಟು ಎದುರಿಸಬೇಕಾಯಿತು. ಯಾವುದೇ ಮತ್ಸರ, ದ್ವೇಷ, ಅಸೂಯೆ, ಪೂರ್ವಗ್ರಹಪೀಡಿತನಾಗದೇ ನಿಷ್ಕಳಂಕ ಮನಸ್ಸಿನಿಂದ ಕರ್ತವ್ಯ ನಿರ್ವಹಿಸಿದ್ದೇನೆ. ಆ ಬಳಿಕ ಅಂದಿನಿಂದ ಇಂದಿನವರೆಗೂ ಸಾಕಷ್ಟು ಮನೋವ್ಯಾಕುಲತೆಯನ್ನು ಅನುಭವಿಸಿದ್ದು, ಸದುದ್ದೇಶದಿಂದ ಈ ಪತ್ರ ಬರೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 15 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಉಪಚುನಾವಣೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ನಾವು ಅನ್ಯ ಪಕ್ಷಗಳಂತೆ ಕೆಸರೆರಚಾಟಕ್ಕೆ ಇಳಿಯದೇ ಪ್ರಜಾಸತ್ತಾತ್ಮಕ ಮೌಲ್ಯದ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಇದನ್ನು ಅಧ್ಯಕ್ಷರ ಗಮನಕ್ಕೆ ತರಬೇಕು ಎಂಬ ಉದ್ದೇಶದಿಂದ ಈ ಪತ್ರ ಬರೆದಿದ್ದೇನೆ’ ಎಂದಿದ್ದಾರೆ.

‘ಉಪಚುನಾವಣೆಗಳ ಸೋಲು– ಗೆಲುವು ಯಾವುದೇ ಪಕ್ಷದ್ದಾಗಿರುವುದಿಲ್ಲ. ಆದರೆ ಇದು ಪ್ರಜಾಸತ್ತೆಯ ಸೋಲು ಅಥವಾ ಗೆಲುವು ಆಗಿರುತ್ತದೆ. ಒಂದು ವೇಳೆ ಅನರ್ಹರು ಒಂದು ಕ್ಷೇತ್ರದಲ್ಲಿ ಜಯಗಳಿಸಿದರೂ ಅದು ತೋಳ್ಬಲಕ್ಕೆ, ಹಣದ ಬಲಕ್ಕೆ ಸಲ್ಲುವ ಜಯವೇ ಹೊರತು ಪ್ರಜಾಸತ್ತೆ ಸಂದ ಜಯವಾಗದು’ ಎಂದು ರಮೇಶ್‌ ಕುಮಾರ್‌ ಹೇಳಿದ್ದಾರೆ.

ಈ ಉಪಚುನಾವಣೆಗಳು ಸಂವಿಧಾನದ ಪಾವಿತ್ರ್ಯಕ್ಕೆ ಒದಗಿರುವ ಸವಾಲು. ತಮ್ಮನ್ನು ಆಯ್ಕೆ ಮಾಡಿ ಕಳಿಸಿದ ಮತದಾರನ ಆತ್ಮಸಾಕ್ಷಿಗೆ ಒಂದು ಸವಾಲು. ಹಣ ಮತ್ತು ತೋಳ್ಬಲದಿಂದ ಸಂವಿಧಾನವನ್ನೇ ಬುಡಮೇಲು ಮಾಡಬಲ್ಲೆವು ಎಂದು ಕೊಬ್ಬಿದ ಮದಗಜಗಳಿಗೆ ಅಂಕುಶ ಹಾಕುವ ಸವಾಲು ಎದುರಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.