ADVERTISEMENT

ಸ್ಮಾರ್ಟ್ ಮೀಟರ್: ಬಿಜೆಪಿಯಿಂದ ಅಪಪ್ರಚಾರ; ರಮೇಶ್ ಬಾಬು

​ಪ್ರಜಾವಾಣಿ ವಾರ್ತೆ
Published 27 ಮೇ 2025, 16:32 IST
Last Updated 27 ಮೇ 2025, 16:32 IST
ರಮೇಶ್‌ಬಾಬು
ರಮೇಶ್‌ಬಾಬು   

ಬೆಂಗಳೂರು: ‘ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾಗೆ ಪೂರಕವಾಗಿ ತೆಗೆದುಕೊಂಡಿರುವ ತೀರ್ಮಾನವೇ ಹೊರತು, ರಾಜ್ಯ ಸರ್ಕಾರದ ತೀರ್ಮಾನವಲ್ಲ. ಆದರೆ, ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಇಂಧನ ಇಲಾಖೆಯಲ್ಲಿ ಆಗುತ್ತಿರುವ ಅಭಿವೃದ್ಧಿ ತಡೆಯುವ ಉದ್ದೇಶದಿಂದ ಸ್ಮಾರ್ಟ್ ಮೀಟರ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಂಬಂಧಿಸಿದಂತೆ, ಬೇನಾಮಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ದೊಡ್ಡ ಸದ್ದು ಮಾಡಿದ್ದು ಚಿಲುಮೆ ಸಂಸ್ಥೆ. ಇದರ ತನಿಖೆ ಇನ್ನು ಬಾಕಿ ಇದ್ದು, ಇದರ ಕಾರಣಕರ್ತ, ಮೂಲ ಜನಕ ಯಾರು ಎಂದು ಅಶ್ವತ್ಥ್ ನಾರಾಯಣ ಅವರೇ ಹೇಳಬೇಕು’ ಎಂದು ಕುಟುಕಿದರು.

‘ಬಿಜೆಪಿ ಮುಖಂಡರಾದ ಅಶ್ವತ್ಥನಾರಾಯಣ, ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರು ಎರಡು ತಿಂಗಳಿಂದ ಸ್ಮಾರ್ಟ್ ಮೀಟರ್ ವಿಚಾರವಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಸ್ಮಾರ್ಟ್‌ ಮೀಟರ್‌ ಅಳವಡಿಕೆ ₹ 15,698 ಕೋಟಿಯ ಹಗರಣ ಎಂದು ಅಶ್ವತ್ಥನಾರಾಯಣ ಹೇಳುತ್ತಿದ್ದಾರೆ. ಅದು ಹೇಗೆ ಎಂದು ಅವರೇ ಹೇಳಬೇಕು. ಅವರು ಅಪ್ರಬುದ್ಧವಾಗಿ ಮಾತನಾಡುತ್ತಿದ್ದಾರೆ. ಅವರ ಪ್ರಕಾರ ₹ 900ಕ್ಕೆ ಸ್ಮಾರ್ಟ್‌ ಮೀಟರ್ ಸಿಗುತ್ತದೆಯಂತೆ. ಆ ದರಕ್ಕೆ ಎಲ್ಲಿ ಸಿಗುತ್ತದೆ, ಅದನ್ನು ಪೂರೈಸುವ ಗುತ್ತಿಗೆದಾರರು ಯಾರು ಎಂದು ಅವರೇ ಹೇಳಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದರು.

ADVERTISEMENT

‘ಸ್ಮಾರ್ಟ್‌ ಮೀಟರ್‌ ಟೆಂಡರ್‌ನಲ್ಲಿ ಭಾಗವಹಿಸಿದ್ದ ಸಹ್ಯಾದ್ರಿ ಸಂಸ್ಥೆಗೂ ನಿಮಗೂ ಏನು ಸಂಬಂಧ? ಆ ಸಂಸ್ಥೆಯ ಟೆಂಡರ್ ಅರ್ಜಿ ವಜಾಗೊಂಡ ನಂತರ ನೀವು ಕೆಂಡಾಮಂಡಲವಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದೀರಲ್ಲಾ ಇದು ಎಷ್ಟು ಸರಿ ಎಂದು  ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.