ADVERTISEMENT

ರಮೇಶ, ಡಿಕೆಶಿ, ಲಕ್ಷ್ಮಿ ಒಂದೇ ಗ್ರೂಪಲ್ಲಿದ್ದರು! ಸತೀಶ ಜಾರಕಿಹೊಳಿ

ಇಲ್ಲವೆಂದು ಹೇಳಲಿ ನೋಡೋಣ ಸತೀಶ ಜಾರಕಿಹೊಳಿ ಸವಾಲು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 11:52 IST
Last Updated 17 ನವೆಂಬರ್ 2019, 11:52 IST
   

ಬೆಳಗಾವಿ: ‘ರಮೇಶ ಜಾರಕಿಹೊಳಿ ಅವರು ಲಕ್ಷ್ಮಿ ಹೆಬ್ಬಾಳಕರ ಕೈ–ಕಾಲಿಗೆ ಬಿದ್ದು ಮಂತ್ರಿಯಾಗಿದ್ದರು. ಇದು ಸುಳ್ಳೆಂದು ಬಹಿರಂಗವಾಗಿ ಹೇಳಲಿ ನೋಡೋಣ’ ಎಂದು ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಸಹೋದರನಿಗೆ ಸವಾಲು ಹಾಕಿದರು.

ಗೋಕಾಕದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ರಮೇಶ, ಡಿ.ಕೆ. ಶಿವಕುಮಾರ್‌ ಹಾಗೂ ಲಕ್ಷ್ಮಿ ಒಂದೇ ಗ್ರೂಪಲ್ಲಿದ್ದರು. ಆಂತರಿಕ ಜಗಳದಿಂದ ರಮೇಶ ಹೊರಬಂದ. ಈಗಿನ ಮಾರುಕಟ್ಟೆಗೆ ತಕ್ಕಂತೆ ಎಚ್. ವಿಶ್ವನಾಥ್ ನನ್ನ ಗುರು ಎನ್ನುತ್ತಿದ್ದಾರೆ. ಹಿಂದೆ ಎಚ್‌.ಕೆ. ಪಾಟೀಲ, ಎಸ್‌.ಎಂ. ಕೃಷ್ಣ, ಸಿದ್ದರಾಮಯ್ಯ ಎಂದಿದ್ದರು. ಬಳಿಕ ಡಿಕೆಶಿ ಆಪ್ತ ನಾಯಕ ಎಂದು ಹೇಳಿದ್ದರು. 2–3 ವರ್ಷಗಳ ಹಿಂದೆ ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದರು’ ಎಂದು ತಿಳಿಸಿದರು.

ADVERTISEMENT

‘ಲಕ್ಷ್ಮಿಯನ್ನು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮಾಡುವಂತೆ ಲಾಬಿ ನಡೆಸಿದ್ದೇ, ಶಿಫಾರಸು ಮಾಡಿದ್ದೇ ರಮೇಶ. ಈಗ ನನ್ನ ಮೇಲೆ ಹಾಕುತ್ತಿದ್ದಾನೆ. ಸುಳ್ಳು ಹೇಳುವುದರಲ್ಲಿ ಪಿಎಚ್‌.ಡಿ ಮಾಡಿದ್ದಾನೆ’ ಎಂದು ಟೀಕಿಸಿದರು.

ಇನ್ಮುಂದೆ ಲಕ್ಷ್ಮಿ ಮನೆಗೆ ಹೋಗುತ್ತೇನೆ:‘ಲಕ್ಷ್ಮಿ ಮನೆಗೆ ಹಿಂದೆ ಚಹಾ ಕುಡಿಯಲು ಹೋಗುತ್ತಿದ್ದುದು ನಿಜ. ಇತ್ತೀಚೆಗೆ ಹೋಗಿಲ್ಲ. ಏಕೆಂದರೆ, ಅವರು ಗೋಕಾಕ ಕ್ಷೇತ್ರದ ಉಸ್ತುವಾರಿ ಇದ್ದಾರೆ. ಚಹಾ, ಊಟ ಸೇರಿ ಎಲ್ಲದಕ್ಕೂ ಅವರ ಮನೆಗೆ ಇನ್ಮುಂದೆ ಹೋಗುತ್ತೇನೆ. ಲಕ್ಷ್ಮಿ ಮತ್ತು ಡಿಕೆಶಿ ಜೊತೆಗೆ ವೈಯಕ್ತಿಕವಾಗಿ ವಿರೋಧ ಇರಲಿಲ್ಲ. ಆದರೆ, ಈ ಹುಚ್ಚನನ್ನು (ರಮೇಶ) ಮಂತ್ರಿ ಮಾಡಿದ್ದಕ್ಕಾಗಿ ಜಗಳವಾಡುತ್ತಿದ್ದೆ’ ಎಂದರು.

‘ಕಾಲೇಜಿನಲ್ಲಿದ್ದಾಗಿನಿಂದಲೂ ರಮೇಶ ಸ್ವಾರ್ಥಿ. ಹೀಗಾಗಿ, ವಿರೋಧಿಸುತ್ತಿದ್ದೇನೆ. ಈಗ ಬೇರೆ ಪಕ್ಷವಾದ್ದರಿಂದ ಇನ್ನೂ ಗಟ್ಟಿಯಾಗಿ ವಿರೋಧಿಸುತ್ತೇನೆ. ಪ್ರಚಾರಕ್ಕೆ ಲಕ್ಷ್ಮಿ, ಡಿ.ಕೆ. ಶಿವಕುಮಾರ್ ಕರೆಸುತ್ತೇನೆ. ರಮೇಶ ಮಾಡಿದ್ದೆಲ್ಲವನ್ನೂ ಅವರಿಂದಲೂ ಹೇಳಿಸಬೇಕಲ್ಲವೇ?’ ಎಂದು ಕೇಳಿದರು.

ಯಡಿಯೂರಪ್ಪ ಅವರನ್ನು ಯಾವ ಗುಂಡಿಗೆ ಹಾಕುತ್ತಾನೋ?:

‘ಕಾಂಗ್ರೆಸ್‌ ಪಕ್ಷ, ಮತದಾರರು ಹಾಗೂ ಲಖನ್‌ ಬೆನ್ನಿಗೆ ಚೂರಿ ಹಾಕಿದ್ದು ರಮೇಶನೇ ಹೊರತು ನಾವಲ್ಲ. ಆತ ಅರ್ಧತಲೆ ಬೋಳಿಸಿ ಹೋಗಿ ಬಿಡುತ್ತಾನೆ’ ಎಂದು ತಿರುಗೇಟು ನೀಡಿದ ಅವರು, ‘ಈಗ ಯಡಿಯೂರಪ್ಪ ಅವರನ್ನು ಯಾವ ಗುಂಡಿಗೆ ಹಾಕುತ್ತಾನೋ ಗೊತ್ತಿಲ್ಲ’ ಎಂದರು.

‌‘ಗೋಕಾಕವೆಂದರೆ ಬಿಹಾರ ಎನ್ನುತ್ತಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಈಗ ರಮೇಶ ಪರ ಪ್ರಚಾರಕ್ಕೆ ಬಂದಿದ್ದಾರೆ. ಈಗ ಗೋಕಾಕ ಬದಲಾಯಿಯೇ ಎಂದು ಪ್ರಶ್ನಿಸಬೇಕಾಗಿದೆ’ ಎಂದರು.

‘ರಮೇಶನ ಮಿದುಳು ಖಾಲಿಯಾಗಿದೆ. ಮೊಬೈಲ್‌ನಂತೆ ಹ್ಯಾಂಗ್ ಆಗುತ್ತಿರುತ್ತದೆ. 25 ವರ್ಷ ಆತನೂ ಕೈಚೀಲ ಹಿಡಿದ್ದಾನೆ. ರಾಜಕೀಯವಾಗಿ ಬೆಳೆಯಲು ಗಾಡ್ ಫಾದರ್ ಬೇಕೇ ಬೇಕು. ಎಲ್ಲ ಪಕ್ಷಗಳಲ್ಲೂ ಸ್ವಾಮಿ ನಿಷ್ಠೆ ಬೇಕು. ಇದು ಚಮಚಾಗಿರಿ ಅಲ್ಲ. ರಮೇಶ ಕೂಡ ಶಂಕರಾನಂದರ ಕೈಚೀಲ ಹಿಡಿದು ಓಡಾಡಿದ್ದ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.