ADVERTISEMENT

ಬೇರೆ ಬೇರೆ ಪಕ್ಷಗಳ ನಾಯಕರ ಭೇಟಿ ಸಹಜ: ಡಿಕೆಶಿಗೆ ಮಾಜಿ ಸಂಸದೆ ರಮ್ಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2022, 13:55 IST
Last Updated 11 ಮೇ 2022, 13:55 IST
   

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರನ್ನು ಗೋಪ್ಯವಾಗಿ ಭೇಟಿಮಾಡಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮಾಜಿ ಸಂಸದೆ, ನಟಿ ರಮ್ಯಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬೇರೆ ಬೇರೆ ಪಕ್ಷಗಳ ನಾಯಕರು ಭೇಟಿಯಾಗುವುದು ಸಹಜ, ಪರಸ್ಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಬೇರೆ ಬೇರೆ ಪಕ್ಷಗಳ ನಾಯಕರ ಕುಟುಂಬಗಳ ನಡುವೆ ಮದುವೆ ಸಂಬಂಧಗಳು ಏರ್ಪಟ್ಟಿವೆ. ಹಾಗಿರುವಾಗ, ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ಬಿ. ಪಾಟೀಲ್ ಮತ್ತು ಅಶ್ವತ್ಥ ನಾರಾಯಣ ಅವರ ಭೇಟಿ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವುದು ಅಚ್ಚರಿ ಎನಿಸುತ್ತಿದೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ಇವುಗಳನ್ನೆಲ್ಲ ಬಿಟ್ಟು ಕಾಂಗ್ರೆಸ್ ಪಕ್ಷದ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಬಾರದೇ? ಎಂದು ರಮ್ಯಾ ಪ್ರಶ್ನಿಸಿದ್ದಾರೆ.

ADVERTISEMENT

ಡಿಕೆಶಿ ಹೇಳಿದ್ದೇನು?: ಪಿಎಸ್ಐ ನೇಮಕಾತಿ ಅಕ್ರಮ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮಗಳಲ್ಲಿ ತಮ್ಮ ವಿರುದ್ಧ ವಾಗ್ದಾಳಿ ನಡೆಸದಂತೆ ಮನವೊಲಿಸಲು ಸಚಿವ ಅಶ್ವತ್ಥ ನಾರಾಯಣ ಅವರು, ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲರನ್ನು ಭೇಟಿಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದರು.

ಆದರೆ, ಅಶ್ವತ್ಥ ನಾರಾಯಣ ಮತ್ತು ಎಂ.ಬಿ. ಪಾಟೀಲ ಇಬ್ಬರೂ ಭೇಟಿಯ ಸುದ್ದಿಯನ್ನು ನಿರಾಕರಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ್ದ ಶಿವಕುಮಾರ್‌, ‘ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಶ್ವತ್ಥ ನಾರಾಯಣ ಅವರು ಎಂ.ಬಿ. ಪಾಟೀಲರನ್ನು ಭೇಟಿಮಾಡಿದ್ದಾರೆ. ತಮ್ಮ ಇಲಾಖೆಗಳ ಹಗರಣಗಳ ಬಗ್ಗೆ ಯಾರೂ ಧ್ವನಿ ಎತ್ತಬಾರದು ಎಂಬುದು ಅವರ ಉದ್ದೇಶ’ ಎಂದರು.

‘ಇದೊಂದು ಖಾಸಗಿ ಭೇಟಿ ಎಂದು ಅವರು ಹೇಳಬಹುದು. ಪಾಟೀಲರು ಶಿಕ್ಷಣ ಸಂಸ್ಥೆ ನಡೆಸುತ್ತಿರುವುದರಿಂದ ಅವರ ಸಲಹೆ ಪಡೆಯುವುದಕ್ಕೆ ಹೋಗಿದ್ದಾಗಿಯೂ ಸಬೂಬು ನೀಡಬಹುದು’ ಎಂದರು.

‘ಸಚಿವರು ಭೇಟಿ ಮಾಡಿಲ್ಲ’

‘ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ನಮ್ಮ ಮನೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು ಮಾಹಿತಿ. ನಾವು ಭೇಟಿ ಮಾಡಿಲ್ಲ’ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಒಂದು ರಾಜಕೀಯ ಪಕ್ಷದ ನಾಯಕ. ಅವರು ಸಚಿವರು. ಭೇಟಿ ಆದರೆ ತಪ್ಪಿಲ್ಲ. ನನ್ನ ಮಗ ಮತ್ತು ಅವರ ಮಕ್ಕಳು ಸಹಪಾಠಿಗಗಳು. ಅದರಲ್ಲಿ ತಪ್ಪು ಹುಡುಕಲಾಗದು’ ಎಂದರು.

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅಶ್ವತ್ಥ ನಾರಾಯಣ ಕುಟುಂಬದ ಪಾತ್ರ ಕುರಿತ ಆರೋಪವಿದೆ. ತನಿಖೆ ನಡೆದಿರುವ ಹಂತದಲ್ಲಿ ಸಚಿವರಾಗಿ ಮುಂದುವರಿಯುವುದು ಸರಿಯಲ್ಲ. ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಎಂ.ಬಿ. ಪಾಟೀಲ್ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.