ADVERTISEMENT

ಬೆಳಗಾವಿ ಹಾಲಿಗೆ ಗೋವಾದಲ್ಲೂ ಬೇಡಿಕೆ!

‘ಬೆಮುಲ್‌’ ಒಂದರಿಂದಲೇ ₹ 60ಸಾವಿರ ಲೀಟರ್‌ ರವಾನೆ

ಎಂ.ಮಹೇಶ
Published 4 ಜೂನ್ 2019, 19:45 IST
Last Updated 4 ಜೂನ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ರಂಜಾನ್ ಮಾಸದ ವ್ರತಾಚರಣೆ ಮುಗಿಯುತ್ತಿದ್ದಂತೆಯೇ ಮುಸ್ಲಿಮರು ಆಚರಿಸುವ ‘ಈದ್‌–ಉಲ್‌–ಫಿತ್ರ್‌’ ಹಬ್ಬದ ಸಂಭ್ರಮಕ್ಕಾಗಿ ಬೆಳಗಾವಿ ಹಾಲಿಗೆ ನೆರೆಯ ಗೋವಾದಲ್ಲೂ ಬೇಡಿಕೆ ಕಂಡುಬಂದಿದೆ.

ಹಬ್ಬದ ಅಂಗವಾಗಿ ಮುಸ್ಲಿಂಮರು ಮನೆಗಳಲ್ಲಿ ‘ಶೀರ್‌ ಖೋರ್ಮಾ’ (ಶಾವಿಗೆ ಪಾಯಸ) ಎಂಬ ವಿಶೇಷ ಖಾದ್ಯ ತಯಾರಿಸುತ್ತಾರೆ. ಆ ಸಮುದಾಯದ ಬಹುತೇಕರ ಮನೆಗಳಲ್ಲಿ ಈ ಖಾದ್ಯ ಇಲ್ಲದೇ ರಂಜಾನ್ ಮಾಸದ ವ್ರತಾಚರಣೆ ಪೂರ್ಣಗೊಳ್ಳುವುದೇ ಇಲ್ಲ. ಧಾರ್ಮಿಕ ಮುಖಂಡರಿಂದ ಹಬ್ಬ ಆಚರಣೆ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುತ್ತಿದ್ದಂತೆಯೇ ಪ್ರತಿ ಕುಟುಂಬದವರೂ ಕನಿಷ್ಠ ಸರಾಸರಿ 5 ಲೀಟರ್‌ಗಳಷ್ಟು ಹಾಲು ಖರೀದಿಗೆ ಮುಂದಾಗುತ್ತಾರೆ. ಹೀಗಾಗಿ ಈ ಹಬ್ಬದಲ್ಲಿ ಹಾಲಿಗೆ ಬಹಳ ಬೇಡಿಕೆ ಇರುತ್ತದೆ. ಬೇಡಿಕೆ ಪೂರೈಸಲು ಹಾಗೂ ವ್ಯವಹಾರ ವೃದ್ಧಿಗಾಗಿ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಬೆಮುಲ್)ದವರು, ಕೆಲವು ಖಾಸಗಿ ಕಂಪನಿಗಳವರು ಹಾಗೂ ಡೇರಿಯವರು ಸಿದ್ಧತೆ ಮಾಡಿಕೊಂಡಿದ್ದಾರೆ.

ಬೆಮುಲ್‌ ಒಂದರಿಂದಲೇ ಆ ರಾಜ್ಯಕ್ಕೆ ₹ 60ಸಾವಿರ ಲೀಟರ್‌ಗೂ ಹೆಚ್ಚಿನ ಹಾಲು ರವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೋದ ವರ್ಷ ₹ 58ಸಾವಿರ ಲೀಟರ್‌ ಕಳುಹಿಸಲಾಗಿತ್ತು. ಈ ಬಾರಿ ಕೊಂಚ ಹೆಚ್ಚಿನ ಆರ್ಡರ್ ಬಂದಿದೆ.

ADVERTISEMENT

ಕೆನೆಭರಿತ ಹಾಲಿಗೆ

‘ಈದ್‌–ಉಲ್–ಫಿತ್ರ್‌ ಹಬ್ಬದಲ್ಲಿ ಕೆನೆಭರಿತ ಹಾಲಿಗೆ ಮುಸ್ಲಿಮರಿಂದ ಬಹಳ ಬೇಡಿಕೆ ಇರುತ್ತದೆ. ಈ ಹಾಲು ಬಳಸಿದರೆ ‘ಶೀರ್‌ ಖೋರ್ಮಾ’ದ ಟೇಸ್ಟ್‌ ಚೆನ್ನಾಗಿರುತ್ತದೆ. ಹಾಲು ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ 45 ‘ನಂದಿನಿ’ ಮಿಲ್ಕ್ ಪಾರ್ಲರ್‌ಗಳು, 80 ಫ್ರಾಂಚೈಸಿಗಳು ಹಾಗೂ 400ಕ್ಕೂ ಹೆಚ್ಚು ಡೀಲರ್‌ಗಳಿದ್ದಾರೆ. ಅವರ ಮೂಲಕ ಹಾಲು ಮಾರಾಟಕ್ಕೆ ವ್ಯವಸ್ಥೆಯಾಗಿದೆ. ಗೋವಾದಿಂದಲೂ ಹೆಚ್ಚಿನ ಬೇಡಿಕೆ ಇದೆ. ಎಮ್ಮೆ ಹಾಲಿಗೆ ಬೇಡಿಕೆ ಹೆಚ್ಚಿದೆ. ‘ನಂದಿನಿ’ ಹಾಲು ಗುಣಮಟ್ಟದಿಂದ ಕೂಡಿರುವುದರಿಂದ ಖರೀದಿಗೆ ಆದ್ಯತೆ ನೀಡುತ್ತಾರೆ’ ಎಂದು ಬೆಮುಲ್‌ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸೋಮ್‌ಪ್ರಸನ್ನ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮಂಗಳವಾರ ಲಕ್ಷ ಲೀಟರ್ ಹಾಲು ಶೇಖರಿಸಿದ್ದೇವೆ. ಚಂದ್ರ ದರ್ಶನವಾಗಿ ಬುಧವಾರ ಹಬ್ಬ ಆಚರಿಸಿದರೆ ಪೂರೈಸುತ್ತವೆ. ಇಲ್ಲವೇ ಮಾರಾಟವಾಗದೇ ಉಳಿದುದನ್ನು ಪುಡಿ ಮಾಡಲು ಬಳಸುತ್ತೇವೆ. ಮರು ದಿನ ಹಬ್ಬ ಆಚರಣೆಯಾದರೆ ಆಗಿನ ಬೇಡಿಕೆಗೆ ತಕ್ಕಂತೆ ‘ನಂದಿನಿ’ ಹಾಲು ಪೂರೈಕೆಗೆ ಸಿದ್ಧವಾಗಿದ್ದೇವೆ’ ಎಂದು ತಿಳಿಸಿದರು.

3 ಲಕ್ಷ ಲೀಟರ್‌ಗೂ ಹೆಚ್ಚು

ಈ ಹಬ್ಬದಲ್ಲಿ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 3 ಲಕ್ಷ ಲೀಟರ್‌ಗೂ ಹೆಚ್ಚಿನ ಪ್ರಮಾಣದ ಹಾಲಿನ ಬೇಡಿಕೆ ಕಂಡುಬಂದಿದೆ.

ಇಲ್ಲಿ ಒಕ್ಕೂಟದೊಂದಿಗೆ, ಖಾಸಗಿ ಕಂಪನಿಗಳು ಕೂಡ ಕ್ರಿಯಾಶೀಲವಾಗಿವೆ. ವಿವಿಧ ಬ್ರಾಂಡ್‌ಗಳ ಹೆಸರನ್ನಿಟ್ಟು ಹಾಲು ಮಾರುತ್ತಿವೆ. ಇವುಗಳು ಕೂಡ ಬೇಡಿಕೆಗೆ ತಕ್ಕಂತೆ ಹಾಲು ಪೂರೈಸಲು ಸಜ್ಜಾಗಿವೆ. ಖಾಸಗಿ ಕಂಪನಿಗಳು ಕೂಡ ಗೋವಾಕ್ಕೆ ಹಾಲು ರವಾನಿಸುತ್ತವೆ.

‘ಹಾಲಿನಿಂದ ತಯಾರಿಸಿದ ‘ಶೀರ್‌ ಖೋರ್ಮಾ’ವನ್ನು ಬಂಧುಗಳು, ಸ್ನೇಹಿತರಿಗೆ ಹಂಚುವುದು ಈ ಹಬ್ಬದ ಸಂಪ್ರದಾಯ. ಹೀಗಾಗಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಹಾಲು ಬೇಕಾಗುತ್ತದೆ. ಕೆಲವರು ಹಬ್ಬದ ಮುನ್ನಾ ದಿನವೇ ಶೇಖರಿಸಿಟ್ಟುಕೊಳ್ಳುತ್ತಾರೆ’ ಎಂದು ಅಜಂ ನಗರದ ಇಮಾಮ್‌ ತಿಳಿಸಿದರು.

ಬಿರಿಯಾನಿ ಮೊದಲಾದ ಮಾಂಸಾಹಾರ ಖಾದ್ಯ ಈ ಹಬ್ಬದ ವಿಶೇಷಗಳಲ್ಲಿನ್ನೊಂದು. ಹೀಗಾಗಿ, ಮಾಂಸಕ್ಕೂ ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.