ADVERTISEMENT

ಸಚಿವ ಸ್ಥಾನಕ್ಕಾಗಿ ರಾಣೆಬೆನ್ನೂರು ಮಾಜಿ ಶಾಸಕ ಶಂಕರ್‌ ದುಂಬಾಲು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 11:55 IST
Last Updated 4 ಫೆಬ್ರುವರಿ 2020, 11:55 IST
ರಾಣೆಬೆನ್ನೂರು ಶಾಸಕ ಆರ್.ಶಂಕರ್
ರಾಣೆಬೆನ್ನೂರು ಶಾಸಕ ಆರ್.ಶಂಕರ್   

ಬೆಂಗಳೂರು: ಇದೇ ಗುರುವಾರ ನಡೆಯುವ ಸಚಿವ ಸಂಪುಟ ವಿಸ್ತರಣೆಯ ಸಂದರ್ಭವೇ ತಮ್ಮನ್ನು ಮಂತ್ರಿ ಮಾಡುವಂತೆ ರಾಣೆಬೆನ್ನೂರಿನ ಮಾಜಿ ಶಾಸಕ ಆರ್‌.ಶಂಕರ್‌ ಅವರು ಮುಖ್ಯಮಂತ್ರಿ ದುಂಬಾಲು ಬಿದ್ದಿದ್ದಾರೆ.

ಸೋಮವಾರ ರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದ ಶಂಕರ್‌ ಅವರು ಇಂದು ಬೆಳಿಗ್ಗೆ ಮತ್ತೆ ಮುಖ್ಯಮಂತ್ರಿಯವರ ನಿವಾಸ ‘ಧವಳಗಿರಿ’ಗೆ ಹೋಗಿ ಗುರುವಾರವೇ ತಮ್ಮನ್ನು ಮಂತ್ರಿ ಮಾಡಬೇಕು ಎಂದ ಅಲವತ್ತುಕೊಂಡರು.

ನಿನ್ನೆ ಭೇಟಿ ನೀಡಿದಾಗ ಜೂನ್‌ನಲ್ಲಿ ವಿಧಾನಪರಿಷತ್‌ ಕೆಲವು ಸ್ಥಾನಗಳು ಖಾಲಿ ಆಗಲಿದ್ದು, ಆಗ ಮೇಲ್ಮನೆಗೆ ಆಯ್ಕೆ ಮಾಡುವುದರ ಜತೆಗೆ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಇದೇ ರೀತಿ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್‌ ಮತ್ತು ಎಚ್‌.ವಿಶ್ವನಾಥ್ ಅವರಿಗೂ ಭರವಸೆ ನೀಡಲಾಗಿತ್ತು. ಶಂಕರ್‌ ಅವರೂ ಒಪ್ಪಿಕೊಂಡಿದ್ದರು. ಆದರೆ, ಬೆಳಿಗ್ಗೆ ಮತ್ತೆ ಮುಖ್ಯಮಂತ್ರಿಯವರಲ್ಲಿ ದುಂಬಾಲು ಬಿದ್ದರು.

ADVERTISEMENT

ಕರಾವಳಿ ಶಾಸಕರಿಂದ ಹೆಚ್ಚಿದ ಒತ್ತಡ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಪ್ರಚಂಡ ಜಯಗಳಿಸಿತ್ತು. ಗೆದ್ದ ಶಾಸಕರ ಪ್ರಮಾಣಕ್ಕನುಗುಣವಾಗಿ ಸಚಿವ ಸ್ಥಾನ ನೀಡುವ ಮಾತಿರಲಿ, ನಾಮಕಾವಸ್ಥೆ ಎಂಬಂತೆ ಕೋಟ ಶ್ರೀನಿವಾಸಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು.

ದಕ್ಷಿಣ ಕನ್ನಡದಲ್ಲಿ ಸುಳ್ಯದ ಶಾಸಕ ಎಸ್‌.ಅಂಗಾರ ಅತಿ ಹೆಚ್ಚು ಬಾರಿ ಗೆದ್ದಿರುವ ಶಾಸಕ. ಆದರೆ, ಅವರಿಗೆ ಇಲ್ಲಿಯವರೆಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ಶಾಸಕ ಎಸ್‌.ಸುನೀಲ್‌ ಕುಮಾರ್‌ ಅವರೂ ಮೂರು ಬಾರಿ ಗೆದ್ದಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಮೊದಲ ಬಾರಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಇದ್ದರು. ಇದೀಗ ಎರಡನೇ ಬಾರಿಯೂ ಸಚಿವ ಸ್ಥಾನ ಸಿಗದೇ ಇರುವುದರಿಂದ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸುಳ್ಯ ಶಾಸಕ ಎಸ್‌.ಅಂಗಾರ ಸುದ್ದಿಗಾರರ ಜತೆ ಮಾತನಾಡಿ, ಕರಾವಳಿ ಭಾಗದವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇವೆ. ನನ್ನನ್ನೂ ಮಂತ್ರಿ ಮಾಡುವಂತೆ ಸುಳ್ಯದ ಜನರು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.