ADVERTISEMENT

ಅತ್ಯಾಚಾರ ಆರೋಪ | ತಲೆಮರೆಸಿಕೊಂಡ ಮುನಿರತ್ನ: ಸಂತ್ರಸ್ತೆ ಪರ ವಕಾಲತ್ತು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 23:30 IST
Last Updated 29 ಮೇ 2025, 23:30 IST
<div class="paragraphs"><p>ಶಾಸಕ ಮುನಿರತ್ನ</p></div>

ಶಾಸಕ ಮುನಿರತ್ನ

   

ಬೆಂಗಳೂರು: ಮಧ್ಯವಯಸ್ಸಿನ ಮಹಿಳೆಯೊಬ್ಬರ ಮೇಲೆ ತನ್ನ ಸಹಚರರಿಂದ ಕಣ್ಣೆದುರೇ ಅತ್ಯಾಚಾರ ಮಾಡಿಸಿದ, ಅತ್ಯಾಚಾರದ ನಂತರ ಆಕೆಯ ಬಾಯಿಗೆ ಮೂತ್ರ ವಿಸರ್ಜಿಸಿದ ಮತ್ತು ಅಪಾಯಕಾರಿ ಚುಚ್ಚುಮದ್ದು ಕೊಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಗುರುತರ ಕ್ರಿಮಿನಲ್‌ ಪ್ರಕರಣದಲ್ಲಿ ಸಂತ್ರಸ್ತೆಯ ಪರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಸಲಾಗಿದೆ.

ಸಂತ್ರಸ್ತೆಯ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು ಗುರುವಾರ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಸಿದರು.

ADVERTISEMENT

ವಕಾಲತ್ತು ಸ್ವೀಕರಿಸಿದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು, ಆರೋಪಿ ಮುನಿರತ್ನ ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಹನುಮಂತರಾಯ ಅವರಿಗೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಿದರು. ಈಗಾಗಲೇ ಈ ಪ್ರಕರಣದಲ್ಲಿ ಜಾಮೀನು ಅರ್ಜಿಗೆ ಪ್ರತಿಯಾಗಿ ಪ್ರಾಸಿಕ್ಯೂಷನ್ ಪರ ವಿಶೇಷ ಪ್ರಾಸಿಕ್ಯೂಟರ್‌ ಪ್ರದೀಪ್‌ ತಮ್ಮ ತಕರಾರನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪ್ರಕರಣವೇನು?:

‘ಬಿಜೆಪಿ ಕಾರ್ಯಕರ್ತೆಯಾಗಿದ್ದೆ ಎಂದು ಹೇಳಿಕೊಂಡಿರುವ 40 ವರ್ಷದ ಮಹಿಳೆಯ ಮೇಲೆ ಮುನಿರತ್ನ ಅವರು ತಮ್ಮ ಸಹಚರರಿಂದ 2023ರ ಜೂನ್‌ 11ರಂದು ಕಣ್ಣೆದುರು ಅತ್ಯಾಚಾರ ಮಾಡಿಸಿದ್ದಾರೆ. ಅತ್ಯಾಚಾರದ ನಂತರ ಸಂತ್ರಸ್ತೆಯ ಬಾಯಿಗೆ ತಮ್ಮ ಮೂತ್ರ ವಿಸರ್ಜಿಸಿದ್ದಾರೆ ಮತ್ತು ಆಕೆ ಜೀವನ ಪರ್ಯಂತ ನರಳುವಂತಹ ಅಪಾಯಕಾರಿ ಚುಚ್ಚುಮದ್ದೊಂದನ್ನು ಕೊಡಿಸಿದ್ದಾರೆ’ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಇದೇ 20ರಂದು ದೂರು ದಾಖಲಾಗಿದೆ.

ಸಂತ್ರಸ್ತೆಯು ಒಟ್ಟು ಐವರ ವಿರುದ್ಧ ಆರ್‌ಎಂಸಿ ಠಾಣೆಗೆ ದೂರು ನೀಡಿದ್ದರು. ಈ ಕ್ರಿಮಿನಲ್ ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿಸಿ ಮುನಿರತ್ನ ಮತ್ತು ನಂದಿನಿ ಲೇ ಔಟ್‌ನ ವಸಂತ, ಚನ್ನಕೇಶವ, ಆಶ್ರಯ ನಗರದ ಕಮಲ್‌ ಹಾಗೂ ಅನಾಮಧೇಯ ವ್ಯಕ್ತಿಯೊಬ್ಬನನ್ನು ಹೆಸರಿಸಲಾಗಿದೆ. ದೂರಿನ ಅನ್ವಯ ಭಾರತೀಯ ದಂಡ ಸಂಹಿತೆ–1860ರ ಕಲಂ 376 ಡಿ, 270, 323, 354, 504, 506,509 ಹಾಗೂ 34ರ ಅಪರಾಧಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಮುನಿರತ್ನ ಸದ್ಯ ತಲೆಮರೆಸಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?:

‘ಹೊಟ್ಟೆನೋವಿನ ಕಾರಣಕ್ಕೆ ನಾನು 2025ರ ಜನವರಿ 14ರಂದು ಸರ್ಕಾರಿ ಆಸ್ಪತ್ರೆಗೆ ತೆರಳಿದ್ದೆ. ಈ ವೇಳೆ ವೈದ್ಯರು ನನ್ನ ರಕ್ತ ಪರೀಕ್ಷೆ ನಡೆಸಿದಾಗ ಇಡಿಆರ್ ವೈರಸ್‌ ಕಾಯಿಲೆ ಇದೆ ಎಂದು ತಿಳಿಸಿದರು. ಇದಕ್ಕೆ ಚಿಕಿತ್ಸೆ ಪಡೆಯಲು ನಾನು ಮತ್ತೊಂದು ಆಸ್ಪತ್ರೆಗೆ ತೆರಳಿದಾಗ ವೈದ್ಯರು ರಕ್ತ ಪರೀಕ್ಷೆಯ ವರದಿ ನೋಡಿ ಇದು ವಾಸಿಯಾಗದ ಕಾಯಿಲೆ ಎಂದರು. ಇದರಿಂದ ಮನನೊಂದು ನಾನು 2025ರ ಮೇ 19ರಂದು ರಾತ್ರಿ 8 ಗಂಟೆ ವೇಳೆ ನನ್ನ ಮನೆಯಲ್ಲಿ ನನ್ನ ಬಳಿ ಇದ್ದ ಮಾತ್ರೆಗಳನ್ನು ನುಂಗಿ ಅಸ್ವಸ್ಥಳಾಗಿದ್ದೆ. ಈ ವೇಳೆ ನನ್ನ ಪರಿಚಯದ ವ್ಯಕ್ತಿಯೊಬ್ಬರು ನನ್ನನ್ನು ಆರ್‌ಎಂಸಿ ಯಾರ್ಡ್‌ ಠಾಣೆ ವ್ಯಾಪ್ತಿಯ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರು’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.