ADVERTISEMENT

ಹೊಸ ಪಡಿತರ ಚೀಟಿಗೆ ತಡೆ: ಜನರ ಪರದಾಟ

ಬೆಟ್ಟವಾಗಿ ಬೆಳೆಯುತ್ತಿರುವ ಬಾಕಿ ಅರ್ಜಿ: ಆಹಾರ ಇಲಾಖೆಗೆ ಎಡತಾಕುತ್ತಿರುವ ಜನ

ವಿಜಯಕುಮಾರ್ ಎಸ್.ಕೆ.
Published 26 ಆಗಸ್ಟ್ 2021, 22:15 IST
Last Updated 26 ಆಗಸ್ಟ್ 2021, 22:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಪಡಿತರ ಚೀಟಿಗೆ ಹೊಸದಾಗಿ ಸಲ್ಲಿಕೆಯಾಗುವ ಅರ್ಜಿ ಮತ್ತು ತಿದ್ದುಪಡಿ ಅರ್ಜಿಗಳ ವಿಲೇವಾರಿಗೆ ಆಹಾರ ನಿರೀಕ್ಷಕರಿಗೆ ಇದ್ದ ಅಧಿಕಾರವನ್ನು ಆಹಾರ ಇಲಾಖೆ ಹಿಂದಕ್ಕೆ ಪಡೆದಿದೆ. ಬಾಕಿ ಇರುವ ಹೊಸ ಅರ್ಜಿಗಳು ಬೆಟ್ಟದಂತೆ ಬೆಳೆಯುತ್ತಿದ್ದು, ಪಡಿತರ ಚೀಟಿಗಾಗಿ ಜನ ಪರದಾಡುವಂತಾಗಿದೆ.‌

ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಅರ್ಜಿಗಳ ಜತೆಗೆ ಲಗತ್ತಿಸುವ ಆದಾಯ ಪ್ರಮಾಣ ಪತ್ರ ಮತ್ತು ವಾಸಸ್ಥಳ ಸಂಬಂಧದ ದಾಖಲೆಗಳನ್ನು ಪರಿಶೀಲಿಸಿ ಆ ಅರ್ಜಿಯನ್ನು ವಿಲೇವಾರಿ ಮಾಡುವ ಅಧಿಕಾರ ಆಹಾರ ನಿರೀಕ್ಷಕರಿಗೆ ಇತ್ತು.

ಅನರ್ಹರಿಗೆ ಬಿಪಿಎಲ್ ಪಡಿತರ ಚೀಟಿ ನೀಡಲಾಗುತ್ತಿದೆ ಎಂಬ ಆರೋಪಗಳಿರುವ ಕಾರಣದಿಂದ ಸದ್ಯಕ್ಕೆ ಅರ್ಜಿಗಳ ವಿಲೇವಾರಿ ಅಧಿಕಾರವನ್ನು ಆರೋಗ್ಯ ನಿರೀಕ್ಷಕರಿಂದ ಮೊಟಕುಗೊಳಿಸಿ ಕೇಂದ್ರ ಕಚೇರಿಯಿಂದಲೇ ನಿರ್ವಹಿಸಲಾಗುತ್ತಿದೆ. ಇದರಿಂದಾಗಿ ಆಹಾರ ಇಲಾಖೆ ಕಚೇರಿಗಳ ಮುಂದೆ ಜನರ ಪ‍ಡಿಪಾಟಲು ಹೆಚ್ಚಾಗುತ್ತಿದೆ.‌

ADVERTISEMENT

ಹೆಸರು ಸೇರ್ಪಡೆ, ಹೆಸರು ಕೈಬಿಡುವುದು, ವಿಳಾಸ ಬದಲು ಸೇರಿ ಹಲವು ತಿದ್ದುಪಡಿಗೆ ಅರ್ಜಿ ಸಲ್ಲಿಸಿರುವ ಜನ ಕಚೇರಿಗಳಿಗೆ ಎಡತಾಕುತ್ತಿದ್ದಾರೆ. ಅತೀ ಜರೂರು ಇರುವ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲು ಆಹಾರ ನೀರೀಕ್ಷಕರ ಲಾಗಿನ್‌ಗೆ ದಿನದಲ್ಲಿ ಅರ್ಧ ಗಂಟೆ ಅಥವಾ ಒಂದು ಗಂಟೆಯ ಅವಕಾಶ ನೀಡಲಾಗುತ್ತಿದೆ. ಈ ಸಮಯವನ್ನು ಮತ್ತೆ ಪ್ರಭಾವಿಗಳೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ.ನಿಜವಾದ ಬಡವರು ಹೊಸದಾಗಿ ಪಡಿತರ ಚೀಟಿ ಪಡೆಯಲು ಅಥವಾ ತಿದ್ದುಪಡಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆಹಾರ ಇಲಾಖೆಯ ಅಧಿಕಾರಿಗಳೇ ಹೇಳುತ್ತಾರೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಪಡಿತರ ಚೀಟಿ ಕಡ್ಡಾಯ. ಅವಿಭಕ್ತ ಕುಟುಂಬದಿಂದ ಪ್ರತ್ಯೇಕಗೊಂಡು ಹೊಸ ಸಂಸಾರ ಆರಂಭಿಸಿದವರು ಬಹುತೇಕ ಹೊಸ ಅರ್ಜಿಗಳನ್ನು ಸಲ್ಲಿಸುತ್ತಾರೆ. ಅಂತವರಿಗೆ ಆರೋಗ್ಯ ಸಮಸ್ಯೆ ಎದುರಾದರೆ ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಕಂದಾಯ ಇಲಾಖೆಯಿಂದ ನೀಡುವ ಆದಾಯ ಪ್ರಮಾಣ ಪತ್ರ ಆಧರಿಸಿಯೇ ಪಡಿತರ ಚೀಟಿ ಮಂಜೂರು ಮಾಡಲಾಗುತ್ತದೆ. ಲೋಪಗಳಾಗಿದ್ದರೆ ಅದಕ್ಕೆ ಕಾರಣವಾದ ಆಹಾರ ನಿರೀಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಆದರೆ, ಅರ್ಜಿ ವಿಲೇವಾರಿಗೆ ಅವಕಾಶವನ್ನೇ ನೀಡದಿದ್ದರೆ ಹೇಗೆ’ ಎಂಬುದು ಅವರ ಪ್ರಶ್ನೆ.

‘ಇದರಿಂದ ಪಡಿತರ ಚೀಟಿ ಬಯಸಿ ಅರ್ಜಿ ಸಲ್ಲಿಸುವ ಅಮಾಯಕರು ತೊಂದರೆ ಅನುಭವಿಸುವಂತಾಗಿದೆ. ಕಚೇರಿಗಳ ಮುಂದೆ ಬಂದು ಅಳಲು ತೋಡಿಕೊಳ್ಳುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಲೋಪ ಸರಿಪಡಿಸಲು ಪ್ರಯತ್ನ

‘ಕೆಲವು ಲೋಪಗಳನ್ನು ಸರಿಪಡಿಸಲು ತಾತ್ಕಾಲಿಕವಾಗಿ ಅರ್ಜಿ ವಿಲೇವಾರಿ ತಡೆ ಹಿಡಿದಿದ್ದೇವೆ’ ಎಂದು ಇಲಾಖೆಯ ಮಾಹಿತಿ ತಂತ್ರಜ್ಞಾನ ಶಾಖೆಯ ಜಂಟಿ ನಿರ್ದೇಶಕ ರಾಮೇಶ್ವರಪ್ಪ ತಿಳಿಸಿದರು.

ಎಪಿಎಲ್ ಕಾರ್ಡ್‌ ಹಿಂಪಡೆದು, ಬಿಪಿಎಲ್ ಪಟ್ಟಿಗೆ ಸೇರಿಸುವುದು, ಯಾರದೋ ಹೆಸರನ್ನು ಪಟ್ಟಿಗೆ ಸೇರಿಸುವುದು ಸೇರಿ ಹಲವು ಅಕ್ರಮಗಳು ನಡೆಯುತ್ತಿವೆ. ಅವುಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ವೈದ್ಯಕೀಯ ಮತ್ತು ಇತರೆ ಸರ್ಕಾರಿ ಸೌಲಭ್ಯ ಪಡೆಯಲು ಅತೀ ಜರೂರು ಇದ್ದವರ ಅರ್ಜಿಗಳನ್ನು ವಿಲೇವಾರಿ ಮಾಡಲು ಅವಕಾಶ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಅಂಕಿ–ಅಂಶ

ರಾಜ್ಯದಲ್ಲಿನ ಒಟ್ಟು ಪಡಿತರ ಚೀಟಿ; 1.47 ಕೋಟಿ

ಅಂತ್ಯೋದಯ; 10 ಲಕ್ಷ

ಬಿಪಿಎಲ್‌; 1.15 ಕೋಟಿ

ಎಪಿಎಲ್‌ ; 21.18 ಲಕ್ಷ

ವಿಲೇವಾರಿಗೆ ಬಾಕಿ ಇರುವ ಅರ್ಜಿ; 3.80 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.