ADVERTISEMENT

1.31 ಲಕ್ಷ ಪಡಿತರ ಚೀಟಿಗಳೇ ಅನರ್ಹ: ಆಹಾರ ಇಲಾಖೆ

‘ಅರ್ಹರ’ ಪಟ್ಟಿಯಲ್ಲಿ ಮೃತ 4,43 ಲಕ್ಷ ಫಲಾನುಭವಿಗಳು

ರಾಜೇಶ್ ರೈ ಚಟ್ಲ
Published 29 ಏಪ್ರಿಲ್ 2021, 19:21 IST
Last Updated 29 ಏಪ್ರಿಲ್ 2021, 19:21 IST
ಉಮೇಶ ಕತ್ತಿ
ಉಮೇಶ ಕತ್ತಿ   

ಬೆಂಗಳೂರು: ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್‌ (ಆದ್ಯತಾ) ಪಡಿತರ ಚೀಟಿಗಳ ಪರಿಶೀಲನಾ ಕಾರ್ಯ ಆರಂಭಿಸಿರುವ ಆಹಾರ ಇಲಾಖೆ, ಮೂರೇ ತಿಂಗಳಲ್ಲಿ 1,31,082 ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಿದೆ. ಇವುಗಳಿಗೆ ಮೇ ತಿಂಗಳಿಂದ ಆಹಾರಧಾನ್ಯ ವಿತರಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಅಲ್ಲದೆ, ಕಂದಾಯ ಇಲಾಖೆಯ ಪಿಂಚಣಿದಾರರ ಪರಿಶೀಲನೆ ವೇಳೆ ಮೃತಪಟ್ಟಿದ್ದಾರೆಂದು ಗುರುತಿಸಿದ, ಆದರೆ ಇನ್ನೂ ಪಡಿತರ ಚೀಟಿಗಳಲ್ಲಿ ಹೆಸರು ಇರುವ 4,42,935 ಫಲಾನುಭವಿಗಳ ಆಹಾರಧಾನ್ಯ ಹಂಚಿಕೆಯನ್ನೂ ಸ್ಥಗಿತಗೊಳಿಸಲು ಇಲಾಖೆ ಮುಂದಾಗಿದೆ.

ಈ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಿಗೆ ಆಹಾರ ಇಲಾಖೆಯ ಆಯುಕ್ತರಾದ ಶಮ್ಲಾ ಇಕ್ಬಾಲ್‌ ಪತ್ರ ಬರೆದಿದ್ದಾರೆ. ಯಾವುದೇ ಅನರ್ಹರಿಗೆ ಅಥವಾ ಮೃತಪಟ್ಟವರ ಹೆಸರಿಗೆ ಮೇ ತಿಂಗಳ ಪಡಿತರಧಾನ್ಯ ಹಂಚಿಕೆಯಾದರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಎಎವೈ ಮತ್ತು ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಸರ್ಕಾರ ನಿಗದಿಪಡಿಸಿದ್ದ ಮಾನದಂಡ ಆಧರಿಸಿ ಜ. 30ರಿಂದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅನರ್ಹರನ್ನು ಪತ್ತೆ ಮಾಡುವ ಕಾರ್ಯಾಚರಣೆಯನ್ನು ಇಲಾಖೆ ಆರಂಭಿಸಿತ್ತು.

ದೂರುಗಳು ಬಂದ ಪಡಿತರ ಚೀಟಿಗಳ ಬಗ್ಗೆ ಆಹಾರ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ, ಅನರ್ಹ ಕಾರ್ಡ್‌ಗಳನ್ನು ಗುರುತಿಸಿದ್ದರು.

ಪಡಿತರ ಚೀಟಿ ಜೊತೆ ಲಿಂಕ್‌ ಆಗಿರುವ ಫಲಾನುಭವಿಗಳ ‘ಆಧಾರ್‌’ ಸಂಖ್ಯೆ ಆಧರಿಸಿ, ಆದಾಯ ತೆರಿಗೆ ಪಾವತಿದಾರರ ಮತ್ತು ಸಾಮಾಜಿಕ ಪಿಂಚಣಿ ಪಡೆಯುವವರ ಹೆಸರುಗಳನ್ನು ಪಡೆದುಕೊಂಡು ಇಲಾಖೆ ಪರಿಶೀಲನೆ ನಡೆಸಿದೆ. ಈ ವೇಳೆ ಅನರ್ಹ ಪಡಿತರ ಚೀಟಿದಾರರನ್ನು ಗುರುತಿಸಿದೆ.

ಇಂಥ ಪಡಿತರ ಚೀಟಿದಾರರು ಈವರೆಗೆ ಪಡೆದ ಆಹಾರಧಾನ್ಯದ ಮೌಲ್ಯ ಲೆಕ್ಕ ಹಾಕಿ ದಂಡ ವಸೂಲು ಮಾಡಲು ಮತ್ತು ದಂಡ ಪಾವತಿಸದಿದ್ದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಇಲಾಖೆ ನಿರ್ಧರಿಸಿದೆ.

‘ಅನರ್ಹರು’ ಇನ್ನೂ ಇದ್ದಾರೆ!:ಸರ್ಕಾರ ನಿಗದಿಪಡಿಸಿದ ಮಾನದಂಡದ ಪ್ರಕಾರ, ಮೂರು ಹೆಕ್ಟೇರ್‌ ಜಮೀನು ಹೊಂದಿರುವವರು, ನಗರಗಳಲ್ಲಿ 1 ಸಾವಿರ ಚದರ ವಿಸ್ತೀರ್ಣದ ಮನೆ ಇರುವವರು, ₹ 1.20 ಲಕ್ಷ ಹೆಚ್ಚು ಆದಾಯ ಹೊಂದಿರುವವರು ಎಎವೈ, ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹರಲ್ಲ. ಆದರೆ, ಜಮೀನು ಮತ್ತು ಮನೆ ಹೊಂದಿದ 2.27 ಲಕ್ಷ ಮತ್ತು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಆದಾಯ ಹೊಂದಿರುವ 49 ಸಾವಿರ ಮಂದಿಯ ಬಳಿ ಎಎವೈ, ಬಿಪಿಎಲ್‌ ಪಡಿತರಚೀಟಿ ಇರುವುದನ್ನು ಇಲಾಖೆ ಪತ್ತೆ ಮಾಡಿದೆ.

ಈ ಪಡಿತರ ಚೀಟಿಗಳು ಅನರ್ಹವೆಂದು ಖಚಿತವಾಗಿದ್ದರೂ, ಇನ್ನಷ್ಟು ಪರಿಶೀಲನೆಯ ಬಳಿಕ ಕ್ರಮ ತೆಗೆದುಕೊಳ್ಳಲು ಇಲಾಖೆ ತೀರ್ಮಾನಿಸಿದೆ. ಕನಿಷ್ಠ ಬೆಂಬಲ ಪಡೆಯಲು ಸಲ್ಲಿಸಿದ ದಾಖಲೆ ಸಲ್ಲಿಸುವ ವೇಳೆ ನೀಡಿದ ಆಧಾರ್ ಸಂಖ್ಯೆ ಮತ್ತು ಆದಾಯ ಪ್ರಮಾಣಪತ್ರ ಪರಿಶೀಲಿಸಿದಾಗ ಈ ‘ಅನರ್ಹ‘ ಪಡಿತರ ಚೀಟಿದಾರರು ಪತ್ತೆಯಾಗಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಐಟಿ ಪಾವತಿದಾರರ ಬಳಿ ‘ಅನ್ನಭಾಗ್ಯ’ದ ಕಾರ್ಡ್!
‘ಅನ್ನಭಾಗ್ಯ’ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿರುವ ಆದಾಯ ತೆರಿಗೆ (ಐಟಿ) ಪಾವತಿದಾರರ ಪೈಕಿ, 5 ಸಾವಿರ ಮಂದಿ ಕಡುಬಡವರಿಗೆ ಮೀಸಲಾದ ಎಎವೈ ಪಡಿತರ ಚೀಟಿ ಹೊಂದಿದ್ದರೆ, 80,204 ಮಂದಿಯ ಬಳಿ ಬಿಪಿಎಲ್‌ ಪಡಿತರ ಚೀಟಿ ಇದೆ.

‘ಆಧಾರ್‌’ ಸಂಖ್ಯೆಯ ಆಧಾರದಲ್ಲಿ ಆದಾಯ ತೆರಿಗೆ ಇಲಾಖೆಯ ನೆರವಿನಿಂದ ಈ ‘ಅನರ್ಹ’ರನ್ನು ಆಹಾರ ಇಲಾಖೆ ಗುರುತಿಸಿದೆ. ಬೆಂಗಳೂರು ಜಿಲ್ಲೆಯ (ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕೇಂದ್ರ ಪಡಿತರ ಪ್ರದೇಶ) 23,995 ತೆರಿಗೆ ಪಾವತಿದಾರರು ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ. 1,159 ಮಂದಿಯ ಬಳಿ ಎಎವೈ ಪಡಿತರ ಚೀಟಿ ಇದೆ.

***

ಅನರ್ಹ ಪಡಿತರ ಚೀಟಿಗಳನ್ನು ಗುರುತಿಸುವ ಕಾರ್ಯ ಮುಂದುವರಿದಿದೆ. ಮುಖ್ಯಮಂತ್ರಿಯ ಗಮನಕ್ಕೆ ತಂದು, ಈ ಕಾರ್ಡ್‌ಗಳ ಬಗ್ಗೆ ಕ್ರಮ ವಹಿಸುತ್ತೇನೆ.
-ಉಮೇಶ ಕತ್ತಿ, ಆಹಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.