ಕಾಲ್ತುಳಿತ
ಕೃಪೆ: ಪಿಟಿಐ
ಹುಬ್ಬಳ್ಳಿ: ‘ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂದು ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನರನ್ನು ವಿಜಯೋತ್ಸವಕ್ಕೆ ಆಹ್ವಾನಿಸಿದ್ದು ಯಾರು? ಸಮಾರಂಭಕ್ಕೆ ಅನುಮತಿ ನೀಡಿದ್ದು ಯಾರು? ಪೊಲೀಸ್ ಅಧಿಕಾರಿಗಳು ವಿಜಯೋತ್ಸವ ಬೇಡ ಎಂದು ಹೇಳಿದ್ದರೂ, ಕಾಂಗ್ರೆಸ್ ಮುಖಂಡರು ತಮ್ಮ ಪ್ರತಿಷ್ಠೆಗಾಗಿ, ಒತ್ತಾಯಪೂರ್ವಕವಾಗಿ ಅದ್ಧೂರಿ ಸಮಾರಂಭ ಮಾಡಲು ನಿರ್ಧರಿಸಿದರು. ಈಗ ಪೊಲೀಸರ ಮೇಲೆಯೇ ಆರೋಪದ ವರದಿ ಸಿದ್ಧವಾಗಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ತನಿಖೆಗೆ ಆಯೋಗ ರಚಿಸುವಪೂರ್ವ, ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿ ಅವರಿಂದ ಅನುಮತಿ ಪಡೆದಿಲ್ಲ. ಹೀಗಾಗಿ ಈ ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿಯೇ ಸಾಕಷ್ಟು ಉದ್ಯೋಗ ಸೃಷ್ಟಿಯಾಗಿದ್ದು, ಲಕ್ಷಾಂತರ ಮಂದಿ ಉದ್ಯೋಗ ಪಡೆದಿದ್ದಾರೆ. ಹೀಗಿದ್ದಾಗಲೂ ವಿರೋಧ ಪಕ್ಷದವರು ನಿರುದ್ಯೋಗ ಹೆಚ್ಚಾಗಿದೆ ಎಂದು ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ಈ ಕುರಿತು ಲೋಕಸಭೆಯಲ್ಲಿ ಅವರು ಚರ್ಚೆಯನ್ನು ಸಹ ಮಾಡಿಲ್ಲ. ತಂತ್ರಜ್ಞಾನ ಆಧಾರಿತವಾಗಿ 525 ಕೇಂದ್ರಗಳನ್ನು ಆರಂಭಿಸಿ, ಉದ್ಯೋಗ ಸೃಷ್ಟಿಸಲಾಗಿದೆ’ ಎಂದರು.
‘ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಡವರಿಗೆ 5 ಕೆ.ಜಿ. ಅಕ್ಕಿ ನೀಡುವ ಯೋಜನೆ ಜಾರಿಗೆ ತಂದಿದ್ದು, ಹಲವು ರಾಜ್ಯಗಳು ಅನುಷ್ಟಾನಕ್ಕೆ ತಂದಿವೆ. ಆದರೆ, ಕರ್ನಾಟದಲ್ಲಿ ಅದು ಇನ್ನೂ ಜಾರಿಯಾಗಿಲ್ಲ. ನಿಜವಾದ ಫಲಾನುಭವಿಗಳಿಗೆ ಪಡಿತರ ಧಾನ್ಯಗಳು ದೊರೆಯಬೇಕು ಎನ್ನುವುದೇ ಕೇಂದ್ರದ ಉದ್ದೇಶವಾಗಿದೆ’ ಎಂದು ಹೇಳಿದರು.
‘ರಾಜ್ಯದ ಕಾಂಗ್ರೆಸ್ ನಾಯಕರು ಮಾತೆತ್ತಿದರೆ ಟ್ರಂಪ್, ಬೈಡನ್, ಮೋದಿ ಹಾಗೂ ಇಸ್ರೇಲ್ ಬಗ್ಗೆ ಮಾತನಾಡುತ್ತಾರೆಯೇ ಹೊರತು, ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎನ್ನುವುದರ ಬಗ್ಗೆ ಚರ್ಚಿಸುವುದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು, ಅವರದ್ದೇ ಶಾಸಕರು, ಗೃಹ ಸಚಿವರು ಹಾಗೂ ಯೋಜನಾ ಆಯೋಗ ಅಧ್ಯಕ್ಷರು ಪರೋಕ್ಷವಾಗಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಸಚಿವ ಜೋಶಿ ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.