ADVERTISEMENT

‘ಕುಗ್ಗುತ್ತಿದೆ ಎಣ್ಣೆಕಾಳು ಬೆಳೆ ಪ್ರದೇಶ’ ಒಳನೋಟ ವರದಿಗೆ ಓದುಗರ ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 15 ಮೇ 2022, 16:19 IST
Last Updated 15 ಮೇ 2022, 16:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:‘ಕುಗ್ಗುತ್ತಿದೆ ಎಣ್ಣೆಕಾಳು ಬೆಳೆ ಪ್ರದೇಶ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಮೇ 15) ‍ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಪ‍್ರತಿಕ್ರಿಯೆಗಳು ಇಲ್ಲಿವೆ.

‘ಪರ್ಯಾಯ ಬೆಳೆಗಳ ಪ್ರಭಾವ’

ADVERTISEMENT

ಸರಿಯಾದ ಬೆಂಬಲ ಬೆಲೆ ಸಿಗದ ಕಾರಣ ಹೆಚ್ಚು ಎಣ್ಣೆಕಾಳುಗಳನ್ನು ಬೆಳೆಯುತ್ತಿದ್ದ ಪ್ರದೇಶಗಳು ಇತ್ತೀಚೆಗೆ ಬೇರೆ ಬೆಳೆಗಳ ಪಾಲಾಗುತ್ತಿವೆ. ನಿಗದಿತ ಬೆಲೆ ಸಿಗದ ಕಾರಣ ಅನ್ಯ ಬೆಳೆಗಳಿಗೆ ರೈತರು ಮೊರೆ ಹೋಗುತ್ತಿದ್ದಾರೆ. ಇದರಿಂದ ಕೃಷಿ ಪ್ರದೇಶಗಳೆಲ್ಲಾ ಬರಡಾಗುತ್ತಿವೆ. ಸರ್ಕಾರ ಸೂಕ್ತ ಬೆಲೆಯನ್ನು ಕೊಡುತ್ತಿಲ್ಲ. ಆದ್ದರಿಂದ ಈ ಪ್ರದೇಶಗಳಲ್ಲಿ ಅನ್ಯ ಬೆಳೆಗಳನ್ನು ಬಿತ್ತನೆ ಮಾಡುತ್ತಿರುವುದರಿಂದ ಎಣ್ಣೆಕಾಳುಗಳ ಬೇಡಿಕೆಯನ್ನು ಕುಗ್ಗುವಂತೆ ಮಾಡಿದೆ. ಸರ್ಕಾರ ನೈಜ ಬೆಲೆಯನ್ನು ನಿಗದಿಪಡಿಸಿ ಖರೀದಿ ಮಾಡಿದಲ್ಲಿ ಯಾವುದೇ ಪ್ರದೇಶಗಳು ಕುಗ್ಗುವುದಿಲ್ಲ. ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಎಣ್ಣೆಕಾಳುಗಳಿಗೂ ಮಾನ್ಯತೆಯನ್ನು ಕೊಡಬೇಕಾಗಿದೆ.


ಮುತ್ತುರಾಜ್,ಹೆಗ್ಗಡದೇವನಕೋಟೆ

‘ಎಣ್ಣೆ ಗಿರಣಿಗಳಿಗೆ ಬೇಕು ಸರ್ಕಾರದ ಪ್ರೋತ್ಸಾಹ’

ಒಂದು ಕಡೆ ಕೊರೊನಾ, ಮತ್ತೊಂದೆಡೆ ರಷ್ಯಾ ಉಕ್ರೇನ್ ಯುದ್ಧ. ಇವುಗಳ ಮಧ್ಯ ಕುಸಿಯುತ್ತಿರುವ ಆಯಿಲ್ ಮಿಲ್‌ಗಳ ಪ್ರದೇಶಗಳು. ರಾಜ್ಯದಲ್ಲಿ ಎಣ್ಣೆ ಕಾಳು ಉತ್ಪಾದನೆ ಕಡಿಮೆಯಾಗಿ ಆಮದು ಜಾಸ್ತಿಯಾಗಿದೆ. ಇದರಿಂದ ಅಡುಗೆ ಎಣ್ಣೆ ಬೆಲೆ ದರ ದುಬಾರಿಯಾಗಿದೆ. ಬೆರಳಣಿಕೆಯಷ್ಟು ಇದ್ದ ಎಣ್ಣೆ ಮಿಲ್‌ಗಳು ಮುಚ್ಚುತ್ತಿವೆ. ಶೇಂಗಾ ಉತ್ಪಾದನೆ ಕುಸಿತ, ಹವಾಮಾನ ವೈಪರೀತ್ಯ, ಸರ್ಕಾರ ನೀತಿ, ಕೃಷಿ ವಲಯದ ಸಮಸ್ಯೆಗಳು ಎಣ್ಣೆ ಗಿರಣಿಗಳ ಆರ್ಥಿಕ ಮೇಲೆ ಪರಿಣಾಮ ಬೀರಿದವು. ಕೃಷಿಕರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರ ಆಮದಿಗೆ ಹೆಚ್ಚಿನ ಒತ್ತು ಕೊಟ್ಟಿದ್ದರಿಂದ ರೈತರು ಎಣ್ಣೆ ಕಾಳುಗಳ ಬದಲಾಗಿ ಅಡಿಕೆ, ಮೆಕ್ಕೆಜೋಳ, ಬೇರೆ ಬೆಳೆಗಳನ್ನು ಬೆಳೆಯಲು ಶುರು ಮಾಡಿದರು. ಸೋಯಾ ಅವರೆ, ಶೇಂಗಾ, ಸೂರ್ಯಕಾಂತಿ, ಕುಸುಬೆ, ಗುರೆಳ್ಳು, ಔಡಲ, ಎಳ್ಳು, ಸಾಸಿವೆ ಎಣ್ಣೆ, ಕೊಬ್ಬರಿ ಎಣ್ಣೆ ಮುಂತಾದವು ಅಲಭ್ಯವಾದ್ದರಿಂದ ಎಣ್ಣೆ ಗಿರಣಿಗಳು ಬಾಗಿಲು ಹಾಕಿವೆ. ಈಗ ರಾಜ್ಯದಲ್ಲಿ ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದೆ. ದಿನೇ ದಿನೇ ಬಡವರ ಜೇಬು ಸುಡುತ್ತಿದೆ. ಕೂಡಲೇ ಸರ್ಕಾರ ತಾಳೆ ಬೆಳೆಯುವ ಕ್ಷೇತ್ರಕ್ಕೆ ಶಕ್ತಿ ತುಂಬಿ. ಎಣ್ಣೆ ಕಾಳು ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಿ, ಸಂಕಷ್ಟದಲ್ಲಿರುವ ಆಯಿಲ್ ಮಿಲ್ ಪ್ರದೇಶಗಳನ್ನು ಉಳಿಸಿಕೊಳ್ಳಬೇಕು.


ನಬಿಸಾಬ ಆರ್.ಬಿ. ದೋಟಿಹಾಳ
(ತಾ. ಕುಷ್ಟಗಿ, ಜಿಲ್ಲಾ ಕೊಪ್ಪಳ )

‘ತೆಂಗಿನ ಎಣ್ಣೆ ಬಳಕೆ ಅನಿವಾರ್ಯ’

ಪ್ರಸ್ತುತ ಭಾರತ ದೇಶಕ್ಕೆ ಪ್ರತಿ ವರ್ಷ ಬೇಕಾಗುವ ಖಾದ್ಯತೈಲ ಪ್ರಮಾಣ 250 ಲಕ್ಷ ಟನ್. ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಎಣ್ಣೆಕಾಳುಗಳಿಂದ ಉತ್ಪತ್ತಿ ಯಾಗುತ್ತಿರುವ ಖಾದ್ಯತೈಲ ಪ್ರಮಾಣ 110 ಲಕ್ಷ ಟನ್. ಖಾದ್ಯತೈಲ ಆಮದಿನಿಂದ ದಿನೇ ದಿನೇ ಬೆಲೆ ಹೆಚ್ಚಳ ಮತ್ತು ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕಳಪೆ ಗುಣಮಟ್ಟದ ಅಶುದ್ಧ ಎಣ್ಣೆಯಿಂದ ಆರೋಗ್ಯದ ಮೇಲೆ ಆಗುತ್ತಿರುವ ಕೆಟ್ಟ ಪರಿಣಾಮಗಳಿಗೆ ತೆಂಗಿನ ಎಣ್ಣೆ ಉಪಯೋಗ ಇಂದು ಅನಿವಾರ್ಯವಾಗಲಿದೆ.

ಕೊಬರಿ ಎಣ್ಣೆಯನ್ನು ಊಟದಲ್ಲಿ ಉಪಯೋಗಿಸಿದರೆ ಅದರಲ್ಲಿ ಕೊಬ್ಬು ಜಾಸ್ತಿ ಇರುವುದರಿಂದ ಹೃದಯಕ್ಕೆ ತೊಂದರೆ ಎಂದು ಪ್ರಚಾರ ಮಾಡಿ ಅದನ್ನು ಮೂಲೆಗುಂಪು ಮಾಡಲು ಬಹುರಾಷ್ಟ್ರೀಯ ಕಂಪನಿಗಳು ಬಹು ದೊಡ್ಡ ಹುನ್ನಾರ ಮಾಡಿವೆ ಮತ್ತು ಮಾಡುತ್ತಿವೆ. ಆದರೆ, ನಮ್ಮ ಕರಾವಳಿ ಪ್ರದೇಶದಲ್ಲಿ ಎಲ್ಲರೂ ತೆಂಗಿನ ಎಣ್ಣೆಯನ್ನೇ ಉಪಯೋಗಿಸುತ್ತಾರೆ. ಈಗ ಎಲ್ಲರಿಗೂ ಇದರ ಅಪಪ್ರಚಾರದ ಬಗ್ಗೆ ಗೊತ್ತಾಗಿದೆ.

ತೆಂಗಿನ ಎಣ್ಣೆಯ ಒಳ್ಳೆಗುಣಗಳು ಬಹಳಿವೆ. ಉದಾಹರಣೆಗೆ, ಅದನ್ನು ಕರಿದು, ಎಷ್ಟೇ ಕುದಿಸಿದರೂ, ಅದರ ಮೂಲಗುಣ ಬದಲಾಗದೆ ಹಾಗೆಯೇ ಇರುವುದು. ಈ ಗುಣ ಬೇರೆ ಯಾವುದೇ ಎಣ್ಣೆನಲ್ಲಿ ಇಲ್ಲ. ಇವುಗಳು ನಿಧಾನ ವಿಷವಾಗಿ ಬದಲಾಗುತ್ತವೆ. ಆದ್ದರಿಂದ, ತೆಂಗಿನ ಎಣ್ಣೆಯನ್ನು ಮರುಬಳಕೆ ಮಾಡಬಹುದು. ಇತ್ತೀಚಿನ ದಿನಗಳಲ್ಲಂತೂ ಮಾರುಕಟ್ಟೆಯಲ್ಲಿ ಎಲ್ಲವೂ ಕಲಬೆರಕೆ. ಆದರಿಂದ ಜನರು ತಾವೇ ಸ್ವತಃ ಎಣ್ಣೆ ಗಾಣದಿಂದ ಎಣ್ಣೆಯನ್ನು ಮಾಡಿಸಿಟ್ಟುಕೊಂಡರೆ ಬಹಳ ಉಪಯುಕ್ತ.

- ಶಶಿಕುಮಾರ್ ಎಸ್, ಜೆ.ಎಸ್.ಬಿ. ಪ್ರತಿಷ್ಠಾನ, ಕೊಳ್ಳೇಗಾಲ

‘ಶೀಘ್ರ ಪರಿಹಾರ ರೂಪಿಸಿ’

ಛೋಟಾ ಮುಂಬೈ ಎಂದೇ ಕರೆಯಲಾಗುತ್ತಿದ್ದ ಚಳ್ಳಕೆರೆಯಲ್ಲಿ ಆಯಿಲ್ ಮಿಲ್‌ಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಹಲವು ಕಾರಣಗಳಿವೆ. ಇದರಲ್ಲಿ ನೈಸರ್ಗಿಕ ಕಾರಣಗಳಿಗೆ ಪರಿಹಾರ ಹುಡುಕುವುದು ಕಷ್ಟ. ಆದರೆ, ಇನ್ನಿತರ ಕಾರಣಕ್ಕೆ ಪರಿಹಾರ ಹುಡುಕಬಹುದು. ಇದರಲ್ಲಿ ಆದಷ್ಟು ಬೇಗ ಆಗಬಹುದಾದ ಪರಿಹಾರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹುಡುಕಬಹುದು. ಇದನ್ನು ಶೀಘ್ರವಾಗಿ ಪರಿಹರಿಸಬಹುದು. ಆದರೆ, ಇಚ್ಛಾಶಕ್ತಿ ಯಾರಿಗೆ ಇದೆ. ಯಾರನ್ನು ದೂರಬೇಕು ಎನ್ನುವುದೇ ಅರ್ಥ ಆಗುತ್ತಿಲ್ಲ.‌ ಇದಕ್ಕೆ ನೇರ ಕಾರಣ ಕೇಂದ್ರ ಸರ್ಕಾರವೋ, ರಾಜ್ಯ ಸರ್ಕಾರವೋ ಅಥವಾ ಆ ಭಾಗದಿಂದ ಆಯ್ಕೆ ಆಗುತ್ತಿರುವ ಜನರ ಪ್ರತಿನಿಧಿಗಳೋ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಇದರಿಂದ ಕಷ್ಟ ಅನುಭವಿಸುತ್ತಿರುವುದು ಜನಸಾಮಾನ್ಯರು. ಇದಕ್ಕೆ ಆದಷ್ಟು ಬೇಗ ಪರಿಹಾರ ಸಿಗಲಿ. ಛೋಟಾ ಮುಂಬೈ ಮತ್ತೆ ಹಳೆಯ ಲಯಕ್ಕೆ ಬರಲಿ ಎನ್ನುವುದೇ ಚಿತ್ರದುರ್ಗ ಜಿಲ್ಲೆಯ ನಾಗರಿಕರಾದ ನಮ್ಮ ಅಭಿಲಾಷೆ.


–ಸಂತೋಷ್ ಕುಮಾರ್ ಜಿ.ಡಿ, ಸಂಶೋಧನಾರ್ಥಿ ಮತ್ತು ಕಾನೂನು ವಿದ್ಯಾರ್ಥಿ, ಹಿರಿಯೂರು.

ಸಮರ್ಪಕ ಬೆಂಬಲ ಬೆಲೆ ನೀಡಬೇಕು

ರೈತ ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗದಿರುವುದು ಮತ್ತು ಹವಾಮಾನದಿಂದ ಆದಂತಹ ವೈಫಲ್ಯಗಳಿಂದಾಗಿ ಸೂರ್ಯಕಾಂತಿ ಶೇಂಗಾ ಬೆಳೆಗಳನ್ನು ಕಡಿಮೆ ಮಾಡಿ ಹೆಚ್ಚಿನ ಬೆಲೆ ಮತ್ತು ಲಾಭದಾಯಕವಾದ ಬೆಳೆಗಳಲ್ಲಿ ಒಂದಾದ ಅಡಿಕೆ ಬೆಳೆಗೆ ಮಾರುಹೋಗಿ ತಾನು ಬೆಳೆಯುತ್ತಿದ್ದ ಬೆಳೆಯನ್ನು ಬಿಟ್ಟು ಅಡಿಕೆ ತೋಟಗಳನ್ನು ಮಾಡಲು ಹೆಚ್ಚಿನ ಆಸಕ್ತಿಯಿಂದ ತೋರುತ್ತಿದ್ದಾರೆ. ಆದ್ದರಿಂದ ಇತರೆ ಕೃಷಿ ಬೆಳೆಗಳು ನಶಿಸುತ್ತಿವೆ. ಸರಿಯಾದ ಬೆಂಬಲ ಬೆಲೆ ಸಿಕ್ಕಿದರೆ ರೈತರು ಯಾವುದೇ ಬೆಳೆಗಳನ್ನು ಬೆಳೆಯಲು ಸಿದ್ಧರಿದ್ದಾರೆ.

– ಹಾಲೇಶ್.ಎನ್., ವಿಜಯನಗರ

‘ಸೂಕ್ತ ಮಾರುಕಟ್ಟೆ ಒದಗಿಸಿ’

ರಷ್ಯಾ- ಉಕ್ರೇನ್ ಯುದ್ಧ ಮತ್ತು ಇಂಡೋನೇಷ್ಯಾ ರಫ್ತು ನಿಷೇಧದಿಂದ ಭಾರತದ ಮಾರುಕಟ್ಟೆ ಮೇಲೆ ನೇರವಾದ ಪರಿಣಾಮ ಬೀರಿದೆ. ಇದರಿಂದ ಬೆಲೆ ಏರಿಕೆಯಾಗಿ ಹಣದುಬ್ಬರ ಹೆಚ್ಚಾಗಿ ಜನಸಾಮಾನ್ಯರ ಹೊಟ್ಟೆಯ ಮೇಲೆ ಬರೆ ಹಾಕಿದಂತಾಗಿದೆ.
ತಾಳೆ ಮತ್ತು ಶೇಂಗಾ ಎಣ್ಣೆಯ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನೀರಾವರಿ ಭೂಮಿ ಹೊಂದಿರುವ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ಎಣ್ಣೆ ಬೆಳೆಯಲು ಸರ್ಕಾರವು ಸೂರ್ಯಕಾಂತಿ, ಸೋಯಾಬೀನ್, ಶೇಂಗಾ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ಸಹಾಯಧನ ನೀಡಬೇಕು. ಜತೆಗೆ ಈ ಬೆಳೆಗಳ ಉತ್ಪನ್ನಕ್ಕೆ ಸೂಕ್ತವಾದ ಮಾರುಕಟ್ಟೆ ಒದಗಿಸಿ ರೈತರನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರ ತುರ್ತಾಗಿ ಮಾಡಬೇಕು.

- ಸಂತೋಷಕುಮಾರ ಎಸ್.ಪಿ., ಗುಲ್ಬರ್ಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.