ADVERTISEMENT

ಅತೃಪ್ತರು ಬಿಜೆಪಿ ಸೇರುವುದು ಶತಸಿದ್ಧ: ಮುಖಂಡರ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 20:15 IST
Last Updated 8 ಜುಲೈ 2019, 20:15 IST
   

ನವದೆಹಲಿ: ‘ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿಗೆ ಬೇಸತ್ತು ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್–ಜೆಡಿಎಸ್ ಶಾಸಕರು ತಮ್ಮ ನಿರ್ಧಾರ ಬದಲಿಸುವ ಸಾಧ್ಯತೆಗಳು ಕಡಿಮೆ. ಅಲ್ಲದೆ, ಅವರೆಲ್ಲ ಬಿಜೆಪಿ ಸೇರುವುದು ಶತಸಿದ್ಧ’– ಕೇಂದ್ರದಲ್ಲಿ ಪ್ರಭಾವಿಯಾಗಿರುವ ರಾಜ್ಯ ಬಿಜೆಪಿಯ ಮುಖಂಡರೊಬ್ಬರ ವಿಶ್ವಾಸದ ಮಾತಿದು.

‘ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಒಪ್ಪಿಗೆ ಪಡೆದೇ ರಾಜೀನಾಮೆ ನಿರ್ಧಾರ ಕೈಗೊಂಡಿರುವ ಅತೃಪ್ತರು ತಿರುಗಿ ನೋಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಾಗಿ ಬಿಜೆಪಿ ಅಧಿಕಾರದ ಸಮೀಪ ಇದ್ದು, ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಅವರು ಹೇಳಿದರು.

ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ, ಕ್ಷೇತ್ರಗಳ ಅಭಿವೃದ್ಧಿಯ ಕೊರತೆ, ಪರಿಸ್ಥಿತಿ ತಿಳಿಗೊಳಿಸುವಂತೆ ಮನವಿ ಮಾಡಿದರೂ ದೊರೆಯದ ಪುರಸ್ಕಾರದಿಂದ ತೀವ್ರ ನೊಂದಿದ್ದ ಕಾಂಗ್ರೆಸ್‌–ಜೆಡಿಎಸ್‌ ಶಾಸಕರು ತಿಂಗಳುಗಳ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ. ಸಚಿವ ಸ್ಥಾನದ ಆಮಿಷ ದೊರೆತರೂ ಅವರು ರಾಜೀನಾಮೆ ಹಿಂದೆ ಪಡೆಯುವುದು ಅಸಾಧ್ಯ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸರ್ಕಾರ ಬೀಳಿಸಲು ಬಿಜೆಪಿ ಅಷ್ಟಾಗಿ ಯತ್ನಿಸಿಲ್ಲ. ಆದರೆ, ಮೈತ್ರಿ ಸರ್ಕಾರದಲ್ಲಿ ಗೌರವ ಸಿಗದೇ ಬೇಸರ ಹೊಂದಿರುವ ಈ ಶಾಸಕರಿಗೇ ಸರ್ಕಾರ ಮುಂದುವರಿಯುವ ಇಚ್ಛೆ ಇದ್ದಂತಿಲ್ಲ. ಹಾಗಾಗಿ ಅವರೇ ಬಿಜೆಪಿಯನ್ನು ಸಂಪರ್ಕಿಸಿದ್ದಾರೆ. ಹೈಕಮಾಂಡ್‌ ಯಾವುದೇ ರೀತಿಯ ಕಸರತ್ತು ನಡೆಸಿಲ್ಲ’ ಎಂದು ಹೇಳಿದರು.

‘ಇನ್ನೂ ಕೆಲವು ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿ ಬಿಜೆಪಿಯತ್ತ ಮುಖ ಮಾಡಲಿದ್ದಾರೆ. ದುರಾಡಳಿತಕ್ಕೆ ಮಂಗಳ ಹಾಡಬೇಕೆಂಬ ಬಯಕೆ ಹೊಂದಿರುವ ಅವರಲ್ಲಿ ಯಾರೊಬ್ಬರೂ ಸಚಿವ ಸ್ಥಾನಕ್ಕೆ ಬೇಡಿಕೆ ಇರಿಸುವ ಸಾಧ್ಯತೆಗಳಿಲ್ಲ’ ಎಂದೂ ಅವರು ಹೇಳಿದರು.

ಸೋನಿಯಾ ಭೇಟಿ ಮಾಡಿದ ಸೌಮ್ಯಾ ರೆಡ್ಡಿ

ಜಯನಗರ ಶಾಸಕಿ, ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರು ಸೋಮವಾರ ಸಂಜೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ವಿವರ ನೀಡಿದರು.

ರಾಜ್ಯದಲ್ಲಿ ನಡೆದಿರುವ ಶಾಸಕರ ರಾಜೀನಾಮೆ ಪರ್ವದ ಕುರಿತು ಸೋನಿಯಾ ಜೊತೆಗಿನ ತಮ್ಮ 15 ನಿಮಿಷಗಳ ಭೇಟಿಯ ವೇಳೆ ಅವರು ಚರ್ಚಿಸಿದರು ಎಂದು ತಿಳಿದುಬಂದಿದೆ.

‘ಸರ್ಕಾರದ ಕಾರ್ಯ ವೈಖರಿಯಿಂದ ಬೇಸತ್ತು ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ’ ಎಂದು ಹೇಳಿದ ಅವರು, ‘ಪರಿಸ್ಥಿತಿ ತಿಳಿಗೊಳ್ಳದಿದ್ದರೆ ನನ್ನ ಸಹಿತ ಇನ್ನೂ ಅನೇಕರು ಪಕ್ಷ ತೊರೆಯುವುದು ಅನಿವಾರ್ಯವಾಗಲಿದೆ’ ಎಂಬ ಅಳಲು ತೋಡಿಕೊಂಡರು.

ಲೋಪಗಳನ್ನು ಸರಿಪಡಿಸುವ ಕಾರ್ಯ ಆರಂಭವಾಗಿದ್ದು, ರಾಜೀನಾಮೆ ಸಲ್ಲಿಸುವ ಹಾಗೂ ಪಕ್ಷ ತೊರೆಯುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಸೂಚಿಸಿದ ಸೋನಿಯಾ ಗಾಂಧಿ, ರಾಮಲಿಂಗಾ ರೆಡ್ಡಿ ಅವರ ಜೊತೆ ಮಾತನಾಡಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಎಂಬ ಭರವಸೆ ನೀಡಿದ್ದಾಗಿ ಪಕ್ಷದ ಮೂಲಗಳು ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.