ADVERTISEMENT

ಬಿಜೆಪಿಗೆ ಈಶ್ವರಪ್ಪರನ್ನು ಮರು ಸೇರ್ಪಡೆ ಮಾಡಿಕೊಳ್ಳಿ: ಮಠಾಧೀಶರ ಸಲಹೆ

ಸಾಧು, ಸಂತರ ಸಾನ್ನಿಧ್ಯದಲ್ಲಿ ಕ್ರಾಂತಿವೀರ ಬ್ರಿಗೇಡ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 14:07 IST
Last Updated 4 ಫೆಬ್ರುವರಿ 2025, 14:07 IST
   

ವಿಜಯಪುರ: ‘ಬಿಜೆಪಿಯಿಂದ ಮುಖ್ಯಮಂತ್ರಿ ಆಗಬೇಕಾಗಿದ್ದ ಕೆ.ಎಸ್‌.ಈಶ್ವರಪ್ಪ ಅವರನ್ನು ಮೂಲೆಗುಂಪು ಮಾಡಿರುವುದು ಸರಿಯಲ್ಲ‌. ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬೇಕು’ ಎಂದು ನಾಡಿನ ಮಠಾಧೀಶರು ಬಿಜೆಪಿ ವರಿಷ್ಠರಿಗೆ ಸಲಹೆ ನೀಡಿದರು.

ಬಸವನ ಬಾಗೇವಾಡಿಯಲ್ಲಿ ಮಂಗಳವಾರ ನಡೆದ ‘ಕ್ರಾಂತಿವೀರ ಬ್ರಿಗೇಡ್‌’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಖಣಾಪುರದ ಸೋಮೇಶ್ವರ ಸ್ವಾಮೀಜಿ, ಈಶ್ವರಪ್ಪ ಅವರನ್ನು ಕಡೆಗಣಿಸಿದ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಮೂಲೆಗುಂಪಾಗಿದೆ. ಅವರನ್ನು ಬಿಜೆಪಿ ಮನೆಯೊಳಗೆಬಿಟ್ಟುಕೊಂಡು ಮಾರ್ಗದರ್ಶನ ಪಡೆಯಬೇಕು’ ಎಂದರು.

ಹುಬ್ಬಳ್ಳಿಯ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ‘ಈಶ್ವರಪ್ಪ ಈಗೊಮ್ಮೆ ಉಪ ಮುಖ್ಯಮಂತ್ರಿ ಆದವರು, ಭವಿಷ್ಯದಲ್ಲಿ ಮುಖ್ಯಮಂತ್ರಿ ಆಗುವವರು’ ಎಂದು ಭವಿಷ್ಯ ನುಡಿದರು. 

ADVERTISEMENT

ಕೈ ಕಡಿಯಿರಿ

ಕಾಂತ್ರಿವೀರ ಬ್ರಿಗೇಡ್‌ನ ರಾಜ್ಯ ಸಂಚಾಲಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ಧರ್ಮ, ಗೋಮಾತ್ರೆ ಮರೆತಿರುವುದರಿಂದ ದೇಶಕ್ಕೆ ಅಪಾಯ ಎದುರಾಗಿದೆ. ನಮ್ಮ ಗೋ ಮಾತ್ರೆಯನ್ನು ಯಾರಾದರೂ ಕಡಿದರೆ ನೋಡಿಕೊಂಡು ಸುಮ್ಮನಿರಲಾಗದು, ಅಂಥವರ ಕೈ ಕಡಿಯುವ ತೀರ್ಮಾನ ಮಾಡೋಣ’ ಎಂದು ಕರೆ ನೀಡಿದರು.

‘ಬ್ರಿಗೇಡ್‌ಗೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಈಗಾಗಲೇ ನಾನು ಮಂತ್ರಿ, ಉಪ ಮುಖ್ಯಮಂತ್ರಿ ಆಗಿದ್ದೇನೆ. ಸಾಧು ಸಂತರ ಪಾದದ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ನಿಮ್ಮ ಮಾರ್ಗ ದರ್ಶನದಲ್ಲಿ ಹಿಂದೂ ಧರ್ಮದ ಉಳಿವಿಗಾಗಿ ಬ್ರಿಗೇಡ್ ಶ್ರಮಿಸಲಿದೆ‌‌’ ಎಂದರು.

ಹಿಂದುಗಳ ಸಂಖ್ಯೆ ಕ್ಷೀಣ

ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ದೇಶದಲ್ಲಿ ಹಿಂದುಗಳ ಜನಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಿವೆ.‌ ದೇಶದ ಅನೇಕ ರಾಜ್ಯ, ನಗರಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ. ಭಾರತದಲ್ಲಿ ಹಿಂದುಗಳ ಸಂಖ್ಯೆ ಶೇ 50ಕ್ಕಿಂತ ಕಡಿಮೆಯಾದರೆ ದೇಶದಲ್ಲಿ ಸಂವಿಧಾನ ಉಳಿಯಲ್ಲ. ದೇಶದಲ್ಲಿ ಮುಸ್ಲಿಮರ ಸಂಖ್ಯೆ ಶೇ 51ರಷ್ಟಾದರೆ ಹಿಂದುಗಳು ದೇಶದಲ್ಲಿ ಉಳಿಯಲು ಸಾಧ್ಯವಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ದೇಶದಲ್ಲಿ ಲವ್ ಜಿಹಾದ್‌, ಲ್ಯಾಂಡ್ ಜಿಹಾದ್ ಸೇರಿದಂತೆ 20 ಬಗೆಯ ಜಿಹಾದ್‌ಗಳು ನಡೆಯುತ್ತಿವೆ. ಇವುಗಳನ್ನು ಹಿಂದುಗಳು ಒಗ್ಗಟ್ಟಿನಿಂದ ಎದುರಿಸಬೇಕು’ ಎಂದರು.

ಯಜಮಾನಿಕೆ ಸರಿಯಲ್ಲ

ತಿಂಥಣಿ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ‘ಧರ್ಮದ ಹೆಸರಲ್ಲಿ ಇನ್ನೊಬ್ಬರ ಮೇಲೆ ಯಾವುದೇ ಹೇರಿಕೆ, ಯಜಮಾನಿಕ ಸರಿಯಲ್ಲ, ಧಾರ್ಮಿಕ ನೆಲೆಯಲ್ಲಿ ದೇಶದ ಸಂವಿಧಾನ ಬದಲಾಯಿಸುವ, ಸಂವಿಧಾನ ವಿರೋಧಿ ಹೇಳಿಕೆ ಒಪ್ಪುವುದಿಲ್ಲ’ ಎಂದರು. 

ಕೆ.ಎಸ್‌.ಈಶ್ವರಪ್ಪ ದಂಪತಿ ಹಾಗೂ ಪುತ್ರ ಕೆ.ಇ.ಕಾಂತೇಶ್‌ ದಂಪತಿ ಸೇರಿದಂತೆ ಬ್ರಿಗೇಡ್‌ನ ಕಾರ್ಯಕರ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದ 1008 ಸಾಧು, ಸಂತರ ಪಾದಪೂಜೆ ಹಾಗೂ ಗೋಪೂಜೆ ನೆರವೇರಿಸಿದರು. ಮಠಾಧೀಶರು ಈಶ್ವರಪ್ಪ ಕೈಗೆ ಖಡ್ಗವನ್ನು ತೊಡಿಸಿ, ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. 10 ಸಾವಿರಕ್ಕೂ ಅಧಿಕ ಜನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.