ADVERTISEMENT

ಯಡಿಯೂರಪ್ಪ ಡೈರಿ 2 ವರ್ಷದಿಂದ ಕೈಲಿದ್ರೂ ಡಿಕೆಶಿ ಏನೂ ಮಾಡಲಿಲ್ಲ: ಕ್ಯಾರವಾನ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 12:20 IST
Last Updated 22 ಮಾರ್ಚ್ 2019, 12:20 IST
ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್
ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಆದಾಯ ತೆರಿಗೆ ಇಲಾಖೆಗೆ ಯಡಿಯೂರಪ್ಪ ಅವರ ಡೈರಿ ಸಿಕ್ಕಿದ್ದೇ ಕಾಂಗ್ರೆಸ್‌ನ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ. ನಾವು (ಕ್ಯಾರವಾನ್ ವರದಿಗಾರರು) ಈ ಡೈರಿಯ ಹಾಳೆಗಳನ್ನು ಡಿ.ಕೆ.ಶಿವಕುಮಾರ್ ಅವರಿಗೆ ತೋರಿಸಿದೆವು. ಅವರು ‘ಈ ಪುಟಗಳನ್ನು ನನ್ನ ಮನೆಯಿಂದ ಆಗಸ್ಟ್ 2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು’ ಎಂದು ಒಪ್ಪಿಕೊಂಡರು. ಆದರೆ ಹೆಚ್ಚೇನೂ ಮಾತನಾಡಲಿಲ್ಲ’ ಎಂದು ‘ಕ್ಯಾರವಾನ್’ ವರದಿ ಉಲ್ಲೇಖಿಸಿದೆ.

‘ಬಿಜೆಪಿಯಿಂದ ದೂರವಾಗಿ ಕೆಜೆಪಿಗೆ ಮರುಜೀವ ಕೊಡುವ ಪ್ರಯತ್ನದಲ್ಲಿದ್ದಾಗ ಯಡಿಯೂರಪ್ಪ ಈ ಡೈರಿ ಬರೆದಿದ್ದಾರೆ. ಈ ವೇಳೆ ಅನಂತಕುಮಾರ್ (2018ರಲ್ಲಿ ನಿಧನರಾದರು),ಈಶ್ವರಪ್ಪ ಸೇರಿದಂತೆ ಹಲವು ಹಿರಿಯ ನಾಯಕರೊಂದಿಗೆ ಯಡಿಯೂರಪ್ಪ ಸಂಬಂಧ ಹಳಸಿತ್ತು. ವಿರೋಧಿಗಳ ಸುಪರ್ದಿಯಲ್ಲಿರುವ ದಾಖಲೆಗಳನ್ನು ಪಡೆದುಕೊಳ್ಳಲು ಈ ನಾಯಕರು ಹಾತೊರೆಯುತ್ತಿದ್ದರು. ಈ ಹಂತದಲ್ಲಿ ಯಡಿಯೂರಪ್ಪ ಅವರ ಖಾಸಗಿ ಸಿಬ್ಬಂದಿಗೆ ದೊರೆತ ಈ ಡೈರಿ ನಂತರದ ದಿನಗಳಲ್ಲಿ ಅನಂತಕುಮಾರ್ ಸೇರಿ ಹಲವು ಹಿರಿಯ ನಾಯಕರ ಕೈ ಸೇರಿತು’ ಎಂದು ಅಧಿಕಾರಿಗಳ ಟಿಪ್ಪಣಿಯನ್ನು ಆಧರಿಸಿ ‘ಕ್ಯಾರವಾನ್’ ವರದಿ ಉಲ್ಲೇಖಿಸಿದೆ.

‘ಸೂಕ್ತ ಸಮಯದಲ್ಲಿ, ಸೂಕ್ತ ವೇದಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ಸೂಚಿಸಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮತ್ತು ಇತರರಿಗೆ ಈ ಡೈರಿಯ ಪ್ರತಿಗಳನ್ನು ಒದಗಿಸಲಾಯಿತು. ಯಡಿಯೂರಪ್ಪ ಅವರೊಡನೆ ಸಂಬಂಧ ಚೆನ್ನಾಗಿದ್ದ ಕಾರಣ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ಈ ಡೈರಿಯ ಬಗ್ಗೆ ಮಾಹಿತಿ ಕೊಡಲಿಲ್ಲ’ ಎಂದು ಅಧಿಕಾರಿಗಳ ಟಿಪ್ಪಣಿ ಹೇಳಿರುವುದಾಗಿ ‘ಕ್ಯಾರವಾನ್’ ವರದಿ ಹೆಳಿದೆ.

ADVERTISEMENT

‘ಆದಾಯ ತೆರಿಗೆ ಇಲಾಖೆಯ ದಾಳಿ ಮತ್ತು ವಶಪಡಿಸಿಕೊಂಡ ದಾಖಲೆಗಳ ಸಮಗ್ರ ಮಾಹಿತಿ ಇರುವ ಕರ್ನಾಟಕದ ಹಿರಿಯ ರಾಜಕಾರಿಣಿಯೊಬ್ಬರು ‘ಇದು ನೂರಕ್ಕೆ ನೂರರಷ್ಟು ಯಡಿಯೂರಪ್ಪ ಅವರೇ ಬರೆದದ್ದು. ಯಾವುದೇ ಅನುಮಾನ ಬೇಡ’ ಎಂದು ದೃಢೀಕರಿಸಿದರು’ ಎಂದು ಕ್ಯಾರವಾನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.